ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ನಾನು ಅವರನ್ನು ಕೇಳುತ್ತೇನೆ, ಜನ ನಿಮ್ಮ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಮಾತನಾಡುತ್ತಿದ್ದಾರೆ. ಹಾಗಿದ್ದಾಗ ಯಾವ ನೈತಿಕತೆ ನಿಮ್ಮ ಪಕ್ಷದಲ್ಲಿ ಇದೆ ಎಂದು ಮಾತನಾಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ: ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೊಡಗು ಜಿಲ್ಲೆಯ ಮುಖಂಡರ ಜೊತೆ ಪಕ್ಷ ಸಂಘಟನೆ ಕುರಿತು ಅವರು ಚರ್ಚಿಸಿದರು. ಬಳಿಕ ಮಾತನಾಡಿದ ಹೆಚ್ಡಿಕೆ, 40 ಪರ್ಸೆಂಟ್ ಸರ್ಕಾರವೆಂದು ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ. ಇಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಆದರೂ ಸದ್ದು ಗದ್ದಲ ಇಲ್ಲ. ದೆಹಲಿಯಲ್ಲಿ ಮನೀಶ್ ಸಿಸೋಡಿಯಾ ಅವರ ಮೇಲೆ ಎಕ್ಸೈಸ್ ಪಾಲಿಸಿ ಒಂದೆರಡು ಕೋಟಿ ಕುರಿತ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ ಆದರೂ ಕೇಳುವವರು ಇಲ್ಲ ಎಂದು ಕಿಡಿಕಾರಿದರು.
ಮೋದಿ ಯಾವ ಸಂದೇಶ ಕೊಡಲು ಬರುತ್ತಿದ್ದಾರೆ?: ದೇಶಕ್ಕೆ ಆರ್ಥಿಕ ಶಕ್ತಿ ಕೊಡುವಂತ ನಗರ ಮಂಗಳೂರು. ಆದರೆ ಅಲ್ಲಿ ದೇಶಕ್ಕೆ ಮಾರಕ ಆಗುವಂತ ವಾತಾವರಣ ನಿರ್ಮಾಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಸಂದೇಶ ಕೊಡಲು ಮಂಗಳೂರಿಗೆ ಬರುತ್ತಿದ್ದಾರೆ. ಅವರು, ಶಾಂತಿಯುತವಾಗಿ ಹೂಡಿಕೆದಾರರು ಬರುವ ರೀತಿ ಸಂದೇಶ ಕೊಟ್ಟರೆ ಬಂದಿದ್ದಕ್ಕೂ ಸಾರ್ಥಕ ಆಗುತ್ತದೆ. ಮತ್ತೆ ಇದೇ ಸಂಘರ್ಷ ಆದರೆ ಅವರು ಬಂದರೂ ಏನು ಪ್ರಯೋಜನ ಎಂದರು.
ಈ ರಾಜ್ಯಕ್ಕೆ ಉತ್ತಮ ಹೆಸರಿತ್ತು. ಆದರೆ ಇದೀಗ ಬಂಡವಾಳ ಹೂಡುವವರು ಯೋಚನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿ. ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡೂ ಪಕ್ಷದಿಂದಲೂ ಯಾವುದೇ ವಿಚಾರ ಇಲ್ಲ. ಒಬ್ಬರು ಸಾವರ್ಕರ್, ಮತ್ತೊಬ್ಬರು ಮಾಂಸ ತಿನ್ನುವ ವಿಚಾರ ಇಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ, ನಾವು ವಿಷಯಾಧಾರವಾಗಿ ಹೊರಟಿದ್ದೇವೆ. ಜನತೆ ಮುಂದೆ ನಾವು ಅಭಿವೃದ್ಧಿ ವಿಚಾರ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.