ಕರ್ನಾಟಕ

karnataka

ಎರಡು ದಿನದಲ್ಲಿ ಕೋರ್ ಕಮಿಟಿ ರಚನೆ, ಅಧಿವೇಶನದಲ್ಲಿ ಚರ್ಚಿಸುವ ಕುರಿತು ಸಭೆ: ಆರ್. ಅಶೋಕ್

By ETV Bharat Karnataka Team

Published : Nov 18, 2023, 1:14 PM IST

R Ashok meets former CM Bommai: ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಆರ್​ ಅಶೋಕ್​ ಒಂದು ಗಂಟೆ ಕಾಲ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

R Ashok meets former CM Bommait
ಮಾಜಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದ ಆರ್​ ಅಶೋಕ್​

ಬೆಂಗಳೂರು: ಇನ್ನು ಎರಡು ದಿನಗಳಲ್ಲಿ ಕೋರ್ ಕಮಿಟಿ ರಚನೆ ಮಾಡಿ, ಅಧಿವೇಶನದಲ್ಲಿ ಚರ್ಚಿಸುವ ಕುರಿತು ಸಭೆ ಮಾಡಲಾಗುವುದು ಎಂದು ನೂತನ ಪ್ರತಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆತ್ಮೀಯ ಗೆಳೆಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಒಂದು ಗಂಟೆ ಪಕ್ಷದ ಸಂಘಟನೆ, ಬೆಳಗಾವಿ ಅಧಿವೇಶನದಲ್ಲಿ, ನಮ್ಮ ನಿಲುವು, ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ ಮಾಡಿದ್ದೇನೆ. ಇನ್ನೆರಡು ದಿನದಲ್ಲಿ ಕೋರ್ ಕಮಿಟಿ ರಚನೆ ಮಾಡಿ, ಅಧಿವೇಶನದಲ್ಲಿ ಚರ್ಚಿಸುವ ಕುರಿತು ಪಕ್ಷದ ರಾಜ್ಯ ನಾಯಕರೊಂದಿಗೆ ಸಭೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಕಾವೇರಿ ನೀರಿಗಾಗಿ ಹೊರಾಟದಲ್ಲಿ ರಾಜ್ಯದ ಜನರಿಗೆ ಮಾಡಿದ ಮೋಸ, ರಾಜ್ಯದ ಹಲವು ಜಿಲ್ಲೆಗಳು ಬರಗಾಲ ಎದುರಿಸುತ್ತಿದ್ದರೂ, ಮಂತ್ರಿಗಳು ಬೆಂಗಳೂರಲ್ಲಿ ಟಿಕಾಣಿ ಹೂಡಿರುವುದು‌. ಡಿಸಿಎಂ ಡಿ.ಕೆ. ಶಿವಕುಮಾರ್​ ಹಾಗೂ ಸಿಎಂ ಸಿದ್ದರಾಮಯ್ಯ ಟೀಮ್ ಮಾಡಿಕೊಂಡು ಸಭೆ ಮಾಡುತ್ತಿರುವುದು. ಟ್ರಾನ್ಸ್​ಫರ್ ದಂಧೆಯಲ್ಲಿ ತೊಡಗಿದ್ದು, 60 ಪರ್ಸೆಂಟ್ ಸರ್ಕಾರ ಅಂತ ಜನರು ಹೇಳುತ್ತಿದ್ದಾರೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ, ಅವರು ಜನರ ಬಳಿ ಹೋಗುತ್ತಿಲ್ಲ. ಉಚಿತ ಹೆಸರಿನಲ್ಲಿ ಹಣ ನೀಡುತ್ತಿರುವುದಾಗಿ ಹೇಳಿದ್ದಾರೆ‌. ಆದರೆ ಆ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಎಲ್ಲ ಹಣ ಪಂಚರಾಜ್ಯ ಚುನಾವಣೆಗೆ ಹೋಗುತ್ತಿದೆ ಎಂದು ದೂರಿದ್ದಾರೆ.

ಅವರ ಸರ್ಕಾರವನ್ನು ಕೆಡವಲು ನಾನ್ಯಾರು, ಅವರ್ಯಾರು ಮುಖ್ಯವಲ್ಲ. ಹಿಂದೆ ಅವರ ಸರ್ಕಾರ ಹೇಗೆ ಬಿದ್ದು ಹೋಯಿತು ಅಂತ ಅವರಿಗೆ ಗೊತ್ತಿದೆ. ಅವರ ನಡುವಿನ ಕಿತ್ತಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ. ನಾವ್ಯಾಕೆ ಬೀಳಿಸೋದು. ಏನೂ ಇಲ್ಲ ಅಂದರೆ ಪರಮೇಶ್ವರ್​ ತಮ್ಮ ಮನೆಯಲ್ಲಿ ಯಾಕೆ ಸಭೆ ಮಾಡಿದರು. ಪಕ್ಕದ ಮನೆಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರನ್ನು ದೂರ ಇಟ್ಟು ಸಭೆ ಮಾಡಿದ್ದೇಕೆ ಎಂದು ಅಶೋಕ್​ ಪ್ರಶ್ನಿಸಿದರು.

ಜಮಿರ್ ಹೇಳಿಕೆ ಕುರಿತು ಅಧಿವೇಶನದಲ್ಲಿ ಮಾತನಾಡುತ್ತೇವೆ‌. ಅವರದು ಸಂವಿಧಾನ ವಿರೋಧಿ ನಡೆ, ಅದನ್ನು ಖಂಡಿಸಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಹೈಕಮಾಂಡ್ ಸೂಚನೆ ನೀಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಉತ್ತರ, ದಕ್ಷಿಣ ಕರ್ನಾಟಕ ಅಂತ ಇಲ್ಲ. ನಾವೆಲ್ಲರೂ ಒಟ್ಟಾಗಿ ಹೋಗುತ್ತೇವೆ. ಎಲ್ಲರೂ ಸೇರಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸುತ್ತೇವೆ‌ ಎಂದು ತಿಳಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ಸೂಪರ್ ಸಿಎಂ ಆಗಿ ಯತೀಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ: ಬಿ ಶ್ರೀರಾಮುಲು ಆರೋಪ

ABOUT THE AUTHOR

...view details