ಬೆಂಗಳೂರು:ನಗರದ ಹೊರವಲಯದಲ್ಲಿರುವ ಬೊಮ್ಮನಹಳ್ಳಿಯ ಸಿಂಗಸಂದ್ರ ಎಇಸಿಎಸ್ ಲೇಔಟ್‌ನಲ್ಲಿ ಸೋಮವಾರ ಕಾಣಿಸಿಕೊಂಡ ಚಿರತೆ, ಈವರೆಗೆ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ. ಪರಿಣಾಮ ಜನರು ಭಯದಲ್ಲಿಯೇ ಓಡಾಡುಂತಾಗಿದೆ. ಸೆರೆಗಾಗಿ ಎರಡು ಬೋನುಗಳನ್ನು ಇಟ್ಟಿರುವ ಅರಣ್ಯ ಇಲಾಖೆ ಐದು ತಂಡಗಳನ್ನು ನಿಯೋಜಿಸಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಡೆಂಜಾ ಅಪಾರ್ಟ್ಮೆಂಟ್ ಸಮೀಪ ಚಿರತೆ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಆದರೆ, ಚಿರತೆ ಮಾತ್ರ ಅಧಿಕಾರಿಗಳ ತಪ್ಪಿಸಿಕೊಂಡು ಓಡಾಡುತ್ತಿದೆ.
ಮೈಸೂರಿನಿಂದ ವಿಶೇಷ ತಂಡ ಸೇರಿದಂತೆ ಬನ್ನೇರುಘಟ್ಟದ ಅರವಳಿಕೆ ತಜ್ಞರು ಕೂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೂ, ಸಹ ಚಿರತೆ ಪತ್ತೆಯಾಗಿಲ್ಲ. ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಲೇಔಟ್ನ ಪಾಳು ಬಿದ್ದ ಕಟ್ಟಡದಲ್ಲಿ ಚಿರತೆಯ ಜಾಡು ಪತ್ತೆಯಾಗಿದ್ದು ಬೆಳಗ್ಗೆಯಿಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಆದರೆ, ಈ ಕಟ್ಟಡದಲ್ಲಿಲ್ಲ ಎಂದು ಖಚಿತಪಡಿಸಿಕೊಂಡ ಅಧಿಕಾರಿಗಳು, ಸದ್ಯಕ್ಕೆ ಬೋನನ್ನು ಅಳವಡಿಸಿ ಅಲ್ಲಿಂದ ಬೇರೆಡೆಗೆ ಕಾರ್ಯಚರಣೆಯನ್ನು ಶಿಫ್ಟ್ ಮಾಡಿದ್ದಾರೆ.
"ಬೆಳಗ್ಗಿನ ಸಮಯದಲ್ಲಿ ಓಡಾಡಲು ಭಯವಾಗುತ್ತಿದೆ. ಜನರು ವಾಕ್ ಬರುವುದನ್ನು ನಿಲ್ಲಿಸಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಚಿರತೆ ಕಾಣಿಸಿಕೊಂಡ ದಿನದಿಂದ ಆತಂಕ ಶುರುವಾಗಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಬೇಕು" ಎಂದು ಸ್ಥಳೀಯ ನಿವಾಸಿ ಸೌಂದರ್ ರಾಜ್ ಮನವಿ ಮಾಡಿದರು.
ದೊಣ್ಣೆ ಹಿಡಿದು ಓಡಾಡುತ್ತಿರುವ ಜನರು: ಅಕ್ಟೋಬರ್ 29ರ ರಾತ್ರಿ ಬೊಮ್ಮನಹಳ್ಳಿಯ ಕೂಡ್ಲು ಭಾಗದ ಜನವಸತಿ ಪ್ರದೇಶ ಸಮೀಪದ ಕಾರಿನ ಗ್ಯಾರೇಜ್ನಲ್ಲಿಯೂ ಚಿರತೆ ಓಡಾಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ಭಯಕ್ಕೆ ಇಲ್ಲಿನ ಜನರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ.
ಮೈಸೂರಿನಿಂದ ವಿಶೇಷ ತಂಡ ಆಗಮನ: ಚಿರತೆ ಕಾರ್ಯಾಚರಣೆಗಾಗಿ ಮೈಸೂರಿನಿಂದ ವಿಶೇಷ ತಂಡ ಬೆಂಗಳೂರಿಗೆ ಆಗಮಿಸಿದೆ. ಈಗಾಗಲೇ ಹಲವೆಡೆ ಚಿರತೆ ಹಿಡಿದು ಪರಿಣತರಾಗಿರುವ ಸಿಬ್ಬಂದಿ ಈ ತಂಡದಲ್ಲಿದ್ದಾರೆ. ಸುರಕ್ಷತಾ ಜಾಕೆಟ್ ಬಳಸಿ ತಂಡ ಅಖಾಡಕ್ಕಿಳಿದಿದೆ. ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ.