ಬೆಂಗಳೂರು:ಸಸ್ಯಕಾಶಿ ಲಾಲ್ಬಾಗ್ನಲ್ಲಿ ಹೂವಿನ ಹಬ್ಬ ಶುರುವಾಗಲಿದೆ. ಮೈಸೂರಿನ ಜಯಚಾಮರಾಜ ಒಡೆಯರ್ ಗುಲಾಬಿಯಲ್ಲಿ ಅನಾವರಣಗೊಳ್ಳಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗುತ್ತಿರೋ ಹೂವಿನ ತೋಟದತ್ತ ಹೋದರೆ ಅಲ್ಲಿ ಹೂಗಳಲ್ಲಿ ಅನಾವರಣಗೊಂಡಿರೋ ಮೈಸೂರಿನ ಸೊಬಗು ನೋಡಬಹುದು.
ಸಿಲಿಕಾನ್ ಸಿಟಿಯ ಮಂದಿಯನ್ನು ಜಂಜಾಟಗಳಿಂದ ದೂರ ಮಾಡಲು ಲಾಲ್ಬಾಗ್ನಲ್ಲಿ 210ನೇ ಫಲಪುಷ್ಟ ಪ್ರದರ್ಶನ ಏರ್ಪಡಿಸಲಾಗಿದೆ. ಈ ಸಂಬಂಧ ತೋಟಗಾರಿಕೆ ಇಲಾಖೆಯ ಆಯುಕ್ತರು ಸುದ್ದಿಗೋಷ್ಠಿ ನಡೆಸಿದರು. ಮೈಸೂರು ಜಯಚಾಮರಾಜ ಒಡೆಯರ್ ಜನ್ಮ ಶತಮಾನೊತ್ಸವ ಆಚರಣೆ ಹಿನ್ನೆಲೆಯಲ್ಲಿ ಒಡೆಯರ್ ಅವರ ಸಾಧನೆ ಹೂಗಳಲ್ಲಿ ಅರಳಲಿದೆ.
ಇನ್ನು ಒಡೆಯರ್ ಪುತ್ಥಳಿಗಾಗಿ 2.5 ಲಕ್ಷ ಹೂವು, ಮೈಸೂರಿನ ಒಡೆಯರ್ ವೃತ್ತದ ಆಕರ್ಷಕ ಗೋಪುರ ನಿರ್ಮಾಣಕ್ಕೆ 5.5 ಲಕ್ಷ ಗುಲಾಬಿ ಹೂಗಳು, 1.5 ಲಕ್ಷ ಇತರೆ ಹೂಗಳನ್ನು ಬಳಕೆ ಮಾಡಲಾಗುತ್ತದೆ. ಜತೆಗೆ ಅಂಬಾರಿ ಆನೆ, ಸಿಂಹಾಸನ ಮಾದರಿ ಹೂಗಳಲ್ಲಿ ಅನಾವರಣಗೊಳ್ಳಲಿದೆ ಎಂದು ಲಾಲ್ಬಾಗ್ ತೋಟಗಾರಿಕೆ ಇಲಾಖೆ ಆಯುಕ್ತ ವೆಂಕಟೇಶ್ ತಿಳಿಸಿದರು.
ಅಷ್ಟೇ ಅಲ್ಲದೆ, ಸಂಗೀತದ ವಾದ್ಯಗಳು, ಸೈನಿಕರ ನೈಜ ಚಿತ್ರಣ ಹೂಗಳಲ್ಲಿ ಅನಾವರಣಗೊಳ್ಳಲಿದೆ. ಪುಣೆ, ಕೇರಳ ಸೇರಿದಂತೆ ಎಲ್ಲ ಕಡೆಯಿಂದ ಹೂಗಳ ಕ್ರೋಢೀಕರಣ ಆಗಿದೆ. ಗ್ಲಾಸಿಮಿಯಾ, ಸೇವಂತಿಗೆ, ಸೈಕ್ಲೋಮನ್, ಗುಲಾಬಿ, ಜಾಜಿ ಮಲ್ಲಿಗೆ, ಮೈಸೂರು ಮಲ್ಲಿಗೆ ಸೇರಿದಂತೆ 92 ಬಗೆಯ ಹೂ ಬಳಕೆ ಆಗಲಿದೆ. ಆ. 9ರಂದು ಸಿಎಂ ಯಡಿಯೂರಪ್ಪ, ಮೈಸೂರು ಒಡೆಯರ್ ಕುಟುಂಬಸ್ಥರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಈ ಬಾರಿಯ ಹೈಲೈಟ್ಸ್:
- ಆಗಸ್ಟ್ 9ರಿಂದ 18ರ ವರೆಗೆ 10 ದಿನಗಳ ಫಲಪುಷ್ಪ ಪ್ರದರ್ಶನ *92 ಬಗೆಯ ಹೂಗಳಿಂದ ಅಲಂಕಾರ
- ಪ್ರವೇಶ ಶುಲ್ಕ ವಯಸ್ಕರಿಗೆ 70 ರೂ., ಮಕ್ಕಳಿಗೆ 20 ರೂಪಾಯಿ
- ಟಿಕೆಟ್ನ್ನು ಬುಕ್ ಮೈ ಶೋ, ಪೇಟಿಯಂ ಮೂಲಕ ಬುಕ್ ಮಾಡಬಹುದು
- ಶಾಲಾ ಮಕ್ಕಳಿಗೆ ಸಮವಸ್ತ್ರದಲ್ಲಿ ಬಂದರೆ ಉಚಿತ, ದಿವ್ಯಾಂಗರು, ಸೈನಿಕರಿಗೆ ಉಚಿತ ಪ್ರವೇಶ
- 100 ಸಿಸಿಟಿವಿ ಕಣ್ಗಾವಲು, ಜೇನು ಕಾಟ ಇರದಂತೆ ಕ್ರಮ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ
- ಗುರುತಿಸಲಾದ ವಾಲ್ಗಳ ಬಳಿ ಪೊಲೀಸ್ ಭದ್ರತೆ
- ಹಿರಿಯ ನಾಗರಿಕರಿಗೆ ವ್ಹೀಲ್ ಚೇರ್, ಬ್ಯಾಟರಿ ಕಾರ್ ಸೌಲಭ್ಯ
- ಒಣ-ಹಸಿ ಕಸ ವಿಂಗಡಣೆಗೆ ಮೊದಲ ಆದ್ಯತೆ
- ಪ್ಲಾಸ್ಟಿಕ್ ಬಳಕೆ ಮೇಲೆ ಕಣ್ಣು- ಸ್ಟೀಲ್ ಪ್ಲೇಟ್ ಬಳಕೆಗೆ ಆದ್ಯತೆ
- ಮಳೆಯಿಂದ ರಕ್ಷಣೆಗೆ ಟಾರ್ಪಲ್ ಬಳಕೆ