ಕರ್ನಾಟಕ

karnataka

ETV Bharat / state

ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಗೆ ಬಹು ಮಾದರಿ ಸಾರಿಗೆ ವ್ಯವಸ್ಥೆ ಅಗತ್ಯ: ನಿತಿನ್ ಗಡ್ಕರಿ - ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ

ರಾಜ್ಯ ಸರ್ಕಾರ ಭೂಮಿ ನೀಡಿದರೆ ರಸ್ತೆ ಸಾರಿಗೆ ಸಚಿವಾಲಯ ಲಾಜಿಸ್ಟಿಕ್ಸ್ ಪಾರ್ಕ್​ಗಳನ್ನು ನಿರ್ಮಿಸಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

five-trillion-dollar-economy-requires-a-multimodal-transportation-system-says-nitin-gadkari
ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಗೆ ಬಹುಮಾದರಿ ಸಾರಿಗೆ ವ್ಯವಸ್ಥೆ ಅಗತ್ಯ: ನಿತಿನ್ ಗಡ್ಕರಿ

By

Published : Sep 8, 2022, 7:40 PM IST

ಬೆಂಗಳೂರು: ಭಾರತ ಐದು ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯನ್ನು ಹೊಂದಬೇಕಾದರೆ ಬಹುಮಾದರಿ ಸಾರಿಗೆಯೊಂದಿಗೆ ಸಮಗ್ರ ವಿಧಾನದ ಪ್ರಾಮುಖ್ಯತೆಯನ್ನು ಅಳವಡಿಸಿಕೊಳ್ಳಬೇಕು. ಗುಣಮಟ್ಟದ ಸುಧಾರಣೆಗಳಿಗಾಗಿ ಎಲ್ಲ ಪಾಲುದಾರರ ನಡುವೆ ಸಹಭಾಗಿತ್ವಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಇಂದು 'ಯೋಜನೆ ಕಾರ್ಯರೂಪಕ್ಕೆ ತರುವ – ಮಂಥನ್' ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾವು ಭಿನ್ನಾಭಿಪ್ರಾಯಗಳಿಂದ ಹೊರಬರಬೇಕು ಮತ್ತು ಒಂದೇ ಕಡೆ ಕುಳಿತು ಆಲೋಚಿಸಬಾರದು. ಪಾಲುದಾರರು ಪರಸ್ಪರ ವಿಷಯಗಳ ಬಗ್ಗೆ ಅರ್ಥಮಾಡಿಕೊಳ್ಳಬೇಕು ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಭವಿಷ್ಯದ ನೀತಿಗಳ ಬಗ್ಗೆ ಯೋಜನೆ ರೂಪಿಸುವತ್ತ ಗಮನಹರಿಸಬೇಕು ಎಂದರು.

ಇದರಿಂದ ಭಾರತದಲ್ಲಿ ಉತ್ಪಾದಿಸಿದ ಇಂಧನದ ಮೇಲೆ ದೇಶದ ಸಾರಿಗೆ ವ್ಯವಸ್ಥೆಯನ್ನು ಮುನ್ನಡೆಸಲು ಸಾಧ್ಯವಾಗಲಿದೆ. ಗುಣಮಟ್ಟದ ಕೊಡುಗೆ ಮತ್ತು ದೃಷ್ಟಿಕೋನದಿಂದ ದೇಶವನ್ನು ಅತ್ಯಂತ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬಹುದು ಎಂದು ತಿಳಿಸಿದರು.

ಅಲ್ಲದೇ, ಭಾರತ ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಹೊಂದಬೇಕಾದರೆ ಬಹುಮಾದರಿ ಸಾರಿಗೆಯೊಂದಿಗೆ ಸಮಗ್ರ ವಿಧಾನದ ಪ್ರಾಮುಖ್ಯತೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಿದ ಸಚಿವರು, ಶೇ.90ರಷ್ಟು ಪ್ರಯಾಣಿಕರ ಸಂಚಾರ ಮತ್ತು ಶೇ.70ರಷ್ಟು ಸರಕುಗಳನ್ನು ಸಾಗಿಸಲು ರಸ್ತೆಯನ್ನು ಬಳಸಲಾಗುತ್ತಿದೆ. ಜಲ ಸಾರಿಗೆ, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳನ್ನು ಪರಸ್ಪರ ಸಂಪರ್ಕಿಸುವ ಅಗತ್ಯವಿದೆ ಹಾಗೂ ಸಾಗಾಣೆ ವಲಯದ ಪಾರ್ಕ್​ಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದರು.

ಲಾಜಿಸ್ಟಿಕ್ಸ್ ಪಾರ್ಕ್​ ನಿರ್ಮಾಣಕ್ಕೆ ಸಿದ್ಧ: ರಾಜ್ಯ ಸರ್ಕಾರ ಭೂಮಿ ನೀಡಿದರೆ ರಸ್ತೆ ಸಾರಿಗೆ ಸಚಿವಾಲಯ ಲಾಜಿಸ್ಟಿಕ್ಸ್ ಪಾರ್ಕ್​ಗಳನ್ನು ನಿರ್ಮಿಸಲಿದೆ. ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡಬೇಕು ಹಾಗೂ ನಿರ್ಮಾಣದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಣೆ ಮಾಡಬೇಕಾಗಿದೆ ಎಂದು ಸಚಿವ ಗಡ್ಕರಿ ಹೇಳಿದರು.

ಸಾಗಣೆ ವೆಚ್ಚವನ್ನು ಶೇ.16ರಿಂದ 10ಕ್ಕೆ ಇಳಿಸಲು (ಚೀನಾ ಶೇ.10 ರಷ್ಟು, ಐರೋಪ್ಯ ರಾಷ್ಟ್ರಗಳಲ್ಲಿ ಶೇ.12ರಷ್ಟು) ಸಮಗ್ರ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಬಸ್​ಗಳು, ಬಂದರುಗಳು ಹೇಗೆ ಬೆಳವಣಿಗೆಯ ಕೇಂದ್ರಗಳಾಗಬಹುದು ಎಂಬ ಉದಾಹರಣೆ ನೀಡಿದ ಸಚಿವರು, ಹೊಸ ತಂತ್ರಜ್ಞಾನಗಳು ಮತ್ತು ಆಧುನಿಕ ಉಪಕರಣಗಳು ಮತ್ತು ಸಾಮಗ್ರಿಗಳನ್ನು ಬಳಸಿ ರಸ್ತೆ ಮೂಲ ಸೌಕರ್ಯ ಸುಧಾರಿಸುವ ಸಂದರ್ಭದಲ್ಲಿ ವಿವಿಧ ಸಾರಿಗೆ ವಲಯಗಳು ಪರಸ್ಪರ ಸಂಪರ್ಕಿಸುವುದು ಅಗತ್ಯ ಎಂದರು.

ಮರಗಳ ಬ್ಯಾಂಕ್ ಯೋಜನೆ:ಸುಸ್ಥಿರ ವಿಧಾನಗಳ ಕುರಿತು ಮಾತನಾಡಿದ ನಿತಿನ್ ಗಡ್ಕರಿ, ಸಚಿವಾಲಯ ಪರಿಸರ ಮತ್ತು ಅರಣ್ಯ ಸಚಿವಾಲಯದೊಂದಿಗೆ ಸೇರಿ ಮರಗಳ ಬ್ಯಾಂಕ್ ಯೋಜನೆಯನ್ನು ರೂಪಿಸಿದೆ. ಇದರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಐಎ) ಹೆದ್ದಾರಿಗಳ ಉದ್ದಕ್ಕೂ ಮರಗಳನ್ನು ನೆಡಲಿದೆ ಮತ್ತು ಆ ಮೂಲಕ ಹಸಿರು ವ್ಯಾಪ್ತಿಯನ್ನು ವಿಸ್ತರಿಸಲಿದೆ. ಸಚಿವಾಲಯದಿಂದ ಇದುವರೆಗೆ 80 ಲಕ್ಷ ಮರಗಳನ್ನು ನೆಡಲಾಗಿದೆ ಎಂದು ತಿಳಿಸಿದರು.

ರಾಜ್ಯಗಳು ಮತ್ತು ಕೇಂದ್ರದ ಸಹಭಾಗಿತ್ವಕ್ಕೆ ಕರೆ ನೀಡಿದ ಸಚಿವರು, 16,000 ಕೋಟಿ ರೂ. ವೆಚ್ಚದ ರಿಮೋಟ್ ಚಾಲಿತ ವಾಹನ ಯೋಜನೆಗೆ ಕೇವಲ ಆರು ರಾಜ್ಯಗಳು ಮಾತ್ರ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿವೆ. ರಾಜ್ಯಗಳು ಮಾಲೀಕತ್ವ ಪಡೆದುಕೊಂಡರೆ ಅವುಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.

ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ಡಾ. ವಿ.ಕೆ.ಸಿಂಗ್ ಮಾತನಾಡಿ, 2008ರಲ್ಲಿ 91,000 ಕಿಲೋಮೀಟರ್ ಇದ್ದ ರಾಷ್ಟ್ರೀಯ ಹೆದ್ದಾರಿ ಪ್ರಮಾಣ ಇದೀಗ 1,41,000 ಕಿಲೋಮೀಟರ್​ಗೆ ಏರಿಕೆಯಾಗಿದೆ. ರಸ್ತೆ ನಿರ್ಮಾಣದ ವೇಗ ಪ್ರತಿದಿನ 12 ಕಿಲೋಮೀಟರ್ ಇತ್ತು. ಈಗ 37 ಕಿಲೋಮೀಟರ್​ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

ಅಲ್ಲದೇ, ವಿನ್ಯಾಸದ ಸಾಮರ್ಥ್ಯ, ಆಧುನಿಕ ಪರಿಕರಗಳು, ಮತ್ತಿತರ ಬಳಕೆ ಸಹ ವೃದ್ಧಿಸಿದೆ. ಸಾರಿಗೆ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರಗಳು ದೊಡ್ಡ ಪಾಲು ಹೊಂದಿವೆ ಮತ್ತು ಅವುಗಳ ಸಹಕಾರದಿಂದ ಭಾರತ ಅಭಿವೃದ್ಧಿ ಹೊಂದಿದ ದೇಶಗಳನ್ನು ಮೀರಿಸಬಹುದು ಎಂದರು.

ಕರ್ನಾಟಕದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರಸ್ತಾಪಿಸಿದರು ಮತ್ತು ಎನ್ಎಚ್ಎಐ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪಟ್ಟಿ ಮಾಡಿದರು. ಇದೇ ಸಮಾರಂಭದಲ್ಲಿ ನಿತಿನ್ ಗಡ್ಕರಿ ಅವರು ಹ್ಯಾಕಥಾನ್​ನಲ್ಲಿ ಭಾಗವಹಿಸಿದ್ದ 10 ಅಪ್ಲಿಕೆಂಟ್ಸ್​ಗಳನ್ನು ವಿಜೇತರೆಂದು ಪ್ರಕಟಿಸಿದರು.

ಇದನ್ನೂ ಓದಿ:ಬೆಂಗಳೂರು ರಸ್ತೆ ಕಾಮಗಾರಿಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ: ಸಿಎಂ ಬೊಮ್ಮಾಯಿ

ABOUT THE AUTHOR

...view details