ಬೆಂಗಳೂರು:ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಿಚಾರಣೆ ನಡೆಸಿ ನೊಟೀಸ್ ನೀಡಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಸಂಬಂಧಪಟ್ಟ ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ತನಿಖೆ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಬಿಬಿಎಂಪಿಯ ಚೀಫ್ ಎಂಜಿನಿಯರ್ ಪ್ರಹ್ಲಾದ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಠಾಣೆ ಪೊಲೀಸರು, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳಾದ ಆನಂದ್, ಸ್ವಾಮಿ ಹಾಗೂ ಡಿ ಗ್ರೂಪ್ ನೌಕರ ಸುರೇಶ್ ವಿರುದ್ಧ ಐಪಿಸಿ ಸೆಕ್ಷನ್ 337, 338 ರ ಪ್ರಕಾರ, ನಿರ್ಲಕ್ಷ್ಯತನ ವಹಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ತಾಂತ್ರಿಕ ವಿಚಾರಣೆ ವರದಿಯನ್ನು ಆಗಸ್ಟ್ 31ರೊಳಗೆ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದರು. "ಬಿಬಿಎಂಪಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ದಿನಾಂಕ: 11-08-2023 ರಂದು ಅಗ್ನಿ ಅವಘಡ ಸಂಭವಿಸಿದ್ದು, ಈ ಸಂಬಂಧ ಆಂತರಿಕ ತಾಂತ್ರಿಕ ವಿಚಾರಣೆ ನಡೆಸಲು ಪಾಲಿಕೆ ಪ್ರಧಾನ ಅಭಿಯಂತರ ಬಿ.ಎಸ್. ಪ್ರಹ್ಲಾದ್ ಅವರಿಗೆ ಸೂಚಿಸಲಾಗಿದೆ" ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.
ಇದನ್ನೂ ಓದಿ:ಬಿಬಿಎಂಪಿ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ: ತನಿಖೆ ಅತ್ಯಗತ್ಯ ಎಂದ ಸಚಿವ ದಿನೇಶ್ ಗುಂಡೂರಾವ್
ಈ ಬಗ್ಗೆ ನಿನ್ನೆಯಷ್ಟೇ ಮಾಧ್ಯಮದ ಜೊತೆ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, "ಘಟನೆಯ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಸೇರಿದಂತೆ ಮೂರು ತಂಡಗಳು ಪ್ರತ್ಯೇಕ ತನಿಖೆ ಮಾಡಲಿವೆ. ಅವಘಡದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಸರ್ಕಾರ ಸೂಚನೆ ನೀಡಿದೆ. ಗಾಯಾಳುಗಳನ್ನು ಐಸಿಯುನಲ್ಲಿ ಇರಿಸಿ ವಿಶೇಷ ಕಾಳಜಿ ವಹಿಸಲಾಗುತ್ತದೆ. ಅವರು ಶೀಘ್ರ ಗುಣಮುಖವಾಗುವಂತೆ ಎಲ್ಲ ನೆರವು ನೀಡುತ್ತೇವೆ. ಅದೃಷ್ಟವಶಾತ್ ಯಾರಿಗೂ ದೃಷ್ಟಿ ತೊಂದರೆ ಆಗಿಲ್ಲ" ಎಂದು ತಿಳಿಸಿದ್ದರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಬೈರತಿ ಸುರೇಶ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, "ಗಾಯಾಳುಗಳನ್ನು ಐಸಿಯುಗೆ ಶಿಫ್ಟ್ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ. ಯಾರೊಬ್ಬರ ಪ್ರಾಣಕ್ಕೂ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡುವಂತೆ ಅವರಿಗೆ ಹೇಳಿದ್ದೇನೆ. ಈ ಘಟನೆ ಹೇಗೆ ನಡೆಯಿತು ಎಂಬುದರ ಬಗ್ಗೆ ಪೊಲೀಸರಿಗೆ ತನಿಖೆ ನಡೆಸಲು ಸೂಚಿಸಿದ್ದೇನೆ" ಎಂದು ಹೇಳಿದ್ದರು.
ಇದನ್ನೂ ಓದಿ:ಬಿಬಿಎಂಪಿ ಕಚೇರಿ ಅಗ್ನಿ ಅವಘಡ ಪ್ರಕರಣವನ್ನು ಮೂರು ಇಲಾಖೆಗಳಿಂದ ತನಿಖೆ ನಡೆಸಲು ಸೂಚನೆ: ಡಿಸಿಎಂ ಡಿ ಕೆ ಶಿವಕುಮಾರ್