ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ವ್ಯಾಪ್ತಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದೆ. ಈ ಸಂಬಂಧ ಆಂತರಿಕ ತಾಂತ್ರಿಕ ವಿಚಾರಣೆ ನಡೆಸಲು ಪಾಲಿಕೆ ಇಂಜಿನಿಯರ್ ಇನ್ ಚೀಫ್ ಬಿ.ಎಸ್ ಪ್ರಹ್ಲಾದ್ ಅವರನ್ನು ನೇಮಿಸಲಾಗಿದೆ. ತಾಂತ್ರಿಕ ವಿಚಾರಣೆ ವರದಿಯನ್ನು ಆಗಸ್ಟ್ 31ರೊಳಗೆ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
"ಬಿಬಿಎಂಪಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ದಿನಾಂಕ: 11-08-2023 ರಂದು ಅಗ್ನಿ ಅವಘಡ ಸಂಭವಿಸಿದ್ದು, ಈ ಸಂಬಂಧ ಆಂತರಿಕ ತಾಂತ್ರಿಕ ವಿಚಾರಣೆ ನಡೆಸಲು ಪಾಲಿಕೆ ಪ್ರಧಾನ ಅಭಿಯಂತರ ಶ್ರೀ ಬಿ.ಎಸ್. ಪ್ರಹ್ಲಾದ್ ಅವರಿಗೆ ಸೂಚಿಸಲಾಗಿದೆ" ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಗುಣ ನಿಯಂತ್ರಣ ಪ್ರಯೋಗಾಲಯ ಸ್ಥಳಾಂತರ - ಡಿಸಿಎಂ: ಅಗ್ನಿ ಅನಾಹುತ ನಡೆದ ಗುಣಮಟ್ಟ ಪರಿಶೀಲನೆ ಪ್ರಯೋಗಾಲಯ ಇರುವ ಜಾಗವೇ ಇದಲ್ಲ. ಮುಖ್ಯಮಂತ್ರಿಗಳು ಕೂಡ ಇದನ್ನು ಗಮನಿಸಿದ್ದಾರೆ. ಇಂತಹ ಪ್ರಯೋಗಾಲಯ ಸುರಕ್ಷಿತ ಜಾಗದಲ್ಲಿ ಇರಬೇಕು. ಹೀಗಾಗಿ ಇದನ್ನು ಸ್ಥಳಾಂತರ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬಿಬಿಎಂಪಿ ಕಚೇರಿ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ "ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಅವಘಡದ ಕುರಿತು ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಸೇರಿದಂತೆ ಮೂರು ತಂಡಗಳು ಪ್ರತ್ಯೇಕ ತನಿಖೆ ಮಾಡಲಿವೆ" ಎಂದರು. ಅವಘಡದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಸರ್ಕಾರ ಸೂಚನೆ ನೀಡಿದೆ. ಗಾಯಾಳುಗಳನ್ನು ಐಸಿಯುನಲ್ಲಿ ಇರಿಸಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅವರ ಶೀಘ್ರ ಗುಣಮುಖವಾಗುವಂತೆ ಎಲ್ಲ ನೆರವು ನೀಡುತ್ತೇವೆ. ಅದೃಷ್ಟವಶಾತ್ ಯಾರಿಗೂ ದೃಷ್ಟಿ ತೊಂದರೆ ಆಗಿಲ್ಲ ಎಂದು ಮಾಹಿತಿ ನೀಡಿದರು.
ಮುಖ್ಯ ಇಂಜಿನಿಯರ್ಗಳಿಂದ ಗಾಯಗೊಂಡವರು ಯುವಕರಾಗಿದ್ದು, ಅವರಿಗೆ ಉಜ್ವಲ ಭವಿಷ್ಯವಿದೆ. ಅವರಿಗೆ ಈ ರೀತಿ ಆಗಬಾರದಿತ್ತು. ಈ ಅವಘಡಕ್ಕೆ ಸಂಬಂಧಿಸಿದಂತೆ ನಾನು ಯಾರ ಮೇಲೂ ದೂರಲು ಹೋಗುವುದಿಲ್ಲ. ಉಳಿದಂತೆ ನಾನು ತನಿಖೆ ಮುಗಿಯುವವರೆಗೂ ಯಾವುದರ ಬಗ್ಗೆಯೂ ಹೇಳಿಕೆ ನೀಡುವುದಿಲ್ಲ ಎಂದರು. ಇದು ಪೂರ್ವ ನಿಯೋಜಿತ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಅವರು ಮಾತಾಡಬೇಕು, ಮಾತನಾಡಲಿ ಬಿಡಿ ಎಂದರು.
ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ, ಡಿಸಿಎಂ, ಸಚಿವರುಗಳ ಭೇಟಿ:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಭೈರತಿ ಸುರೇಶ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ "ಗಾಯಾಳುಗಳನ್ನು ಐಸಿಯುಗೆ ಶಿಫ್ಟ್ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಯಾರೊಬ್ಬರ ಪ್ರಾಣಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ. ಈ ಘಟನೆ ಏಕಾಯಿತು? ಎಂಬುದರ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ" ಎಂದರು.
ಸಚಿವ ಕೆ.ಜೆ ಜಾರ್ಜ್ ಮಾತನಾಡಿ, ಬೆಂಕಿ ಅವಘಡದಲ್ಲಿ ಕೆಲವರಿಗೆ ಸುಟ್ಟಗಾಯಗಳಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ವೈದ್ಯರು ಕೂಡ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರವೇ ಎಲ್ಲ ವೆಚ್ಚವನ್ನು ಭರಿಸಲಿದೆ ಎಂದರು. ಪ್ರಯೋಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಂತರ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಸಚಿವ ಜಾರ್ಜ್ ಮಾಹಿತಿ ನೀಡಿದರು.
ಇದನ್ನೂ ಓದಿ:Fire accident: ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ; ಪೊಲೀಸ್ ತನಿಖೆಗೆ ಸಿಎಂ ಸೂಚನೆ- ಡಿಕೆಶಿ