ಬೆಂಗಳೂರು: ನಗರದಲ್ಲಿ ಮಂಗಳವಾರ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗುವಿನ ದುರಂತ ಸಾವಿಗೆ ಕಾರಣವಾದ ಆರೋಪದಡಿ 8 ಜನರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಾಣದ ಹೊಣೆ ಹೊತ್ತಿದ್ದ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ, ಅದರ ಜ್ಯೂನಿಯರ್ ಇಂಜಿನಿಯರ್ ಪ್ರಭಾಕರ್, ನಿರ್ದೇಶಕ ಚೈತನ್ಯ, ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಮಥಾಯ್, ಪ್ರಾಜೆಕ್ಟ್ ಮ್ಯಾನೇಜರ್ ವಿಕಾಸ್ ಸಿಂಗ್, ಸೂಪರ್ವೈಸರ್ ಲಕ್ಷ್ಮೀಪತಿ, ಬಿಎಂಆರ್ಸಿಎಲ್ನ ವೆಂಕಟೇಶ್ ಶೆಟ್ಟಿ ಹಾಗೂ ಎಕ್ಸಿಕ್ಯುಟಿವ್ ಇಂಜಿನಿಯರ್ ಮಹೇಶ್ ಬೆಂಡೆಕೇರಿ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಕುರಿತು ಮಾತನಾಡಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, 'ಮೃತಳ ಪತಿ ಲೋಹಿತ್ ನೀಡಿರುವ ದೂರಿನನ್ವಯ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ ಐವರ ಹೆಸರುಗಳನ್ನ ಕೊಟ್ಟಿದಾರೆ. ನಾವು ಪ್ರಕರಣದಲ್ಲಿ ಯಾರ ಹೆಸರೂ ಉಲ್ಲೇಖ ಮಾಡಿರಲಿಲ್ಲ. ಈಗಾಗಲೇ ತನಿಖೆ ಮುಂದುವರೆಸಿದ್ದು, ಕನ್‌ಸ್ಟ್ರಕ್ಷನ್ ಕಂಪನಿ, ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೇವೆ. ಈಗಾಗಲೇ ಬಿಎಂಆರ್ಸಿಎಲ್ ಅಧಿಕಾರಿಗಳು ವಿಚಾರಣೆಗೆ ಬಂದಿದ್ದು ವಿಚಾರಣೆ ನಡೆಸಲಾಗುತ್ತಿದೆ' ಎಂದಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಈಗಲೇ ಯಾರದ್ದು ತಪ್ಪು ಅಂತಾ ಹೇಳಲು ಸಾಧ್ಯವಿಲ್ಲ. ಮತ್ತಷ್ಟು ವಿಚಾರಣೆಯ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ.. ನಾಗವಾರ ರಿಂಗ್ ರಸ್ತೆಯ ಹೆಚ್ಬಿಆರ್ ಲೇಔಟ್ನಲ್ಲಿ ನಿನ್ನೆ(ಮಂಗಳವಾರ) ಬೆಳಗ್ಗೆ 10:30ರ ಸುಮಾರಿಗೆ ಗದಗ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್, ಪತ್ನಿ ತೇಜಸ್ವಿನಿ ಮತ್ತು ಇಬ್ಬರು ಅವಳಿ ಮಕ್ಕಳೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಪತ್ನಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡಲು ಮಾನ್ಯತಾ ಟೆಕ್ಪಾರ್ಕ್ ಕಡೆ ಲೋಹಿತ್ ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರನೇ ಕುಸಿದಿದೆ. ಘಟನೆಯಲ್ಲಿ ತೇಜಸ್ವಿನಿ (35) ಮತ್ತು ಎರಡೂವರೆ ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಪಾರಾಗಿದ್ದರು.