ಹೊಸಕೋಟೆ: ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಸ್ಮಗ್ಲಿಂಗ್ ಮಾಡಿರುವ ಆರೋಪದಡಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ. ರಕ್ತಚಂದನ ತುಂಡುಗಳನ್ನು ಮಾರಾಟ ಮಾಡಿ ಸಿಕ್ಕಿಬಿದ್ದ ಇಬ್ಬರು ಸಿಸಿಬಿ ಹೆಡ್ ಕಾನ್ಸ್ ಟೇಬಲ್ಗಳ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆಂಧ್ರಪ್ರದೇಶದಿಂದ ಅಕ್ರಮವಾಗಿ ರಕ್ತಚಂದನ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಕಳೆದ ಡಿಸೆಂಬರ್ 15 ರಂದು ಪೊಲೀಸರುದಾಳಿ ನಡೆಸಿದ್ದರು. ಆರೋಪಿಗಳಿಂದ 13 ಲಕ್ಷ ಮೌಲ್ಯದ 21 ರಕ್ತಚಂದನ ತುಂಡು ಸಮೇತ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದರು. ನಂತರ ಮೇಲಾಧಿಕಾರಿಗಳ ಗಮನಕ್ಕೆ ಬರದಂತೆ ರಕ್ತಚಂದನ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸದೇ, ಬಿಟ್ಟು ಕಳುಹಿಸಿದ್ದರಲ್ಲದೇ ಬಳಿಕ ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಮಾರಾಟ ಮಾಡಿದ್ದರು ಎಂಬ ಆರೋಪ ಇದಾಗಿದೆ.
ಈ ಕುರಿತು ಹೊಸಕೋಟೆ ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿತ್ತು. ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಮೋಹನ್ ಹಾಗೂ ಮಹದೇವಪುರ ಠಾಣೆಯ ಹೆಚ್.ಸಿ.ಮಮ್ತೇಶ್ ಗೌಡ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣ ಮಾಹಿತಿ:
ಡಿಸೆಂಬರ್ 15 ರಂದು ನೆರೆಯ ಆಂಧ್ರ ಪ್ರದೇಶದಿಂದ ರೆಡ್ ಸ್ಯಾಂಡಲ್ ಸಾಗಿಸುತ್ತಿರುವ ಬಗ್ಗೆ ಪಕ್ಕಾ ಮಾಹಿತಿ ಪಡೆದಿದ್ದ ಸಿಸಿಬಿ ಹೆಡ್ ಕಾನ್ಸ್‌ಟೇಬಲ್ ಮೋಹನ್ ಮತ್ತು ಮಹದೇವಪುರ ಠಾಣೆಯ ಹೆಚ್.ಸಿ. ಮಮ್ತೇಶ್ ಗೌಡ ಖಚಿತ ಮಾಹಿತಿ ಮೇರೆಗೆ ಕೋಲಾರದ ಶ್ರೀನಿವಾಸಪುರಕ್ಕೆ ತೆರಳಿದ್ದರು. ಶ್ರೀನಿವಾಸಪುರದಿಂದ ಚಿಂತಾಮಣಿ ಮೂಲಕ ಹೊಸಕೋಟೆಗೆ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ ಹಿಂಬಾಲಿಸಿ ಹೊಸಕೋಟೆಯ ಸಂತೇಗೇಟ್ ಬಳಿ ಬರುತ್ತಿದ್ದಂತೆ ಅಪಘಾತದ ಡ್ರಾಮ ಮಾಡಿ ಟಾಟಾಏಸ್ ನಿಲ್ಲಿಸಿದ್ದರು ಎನ್ನಲಾಗ್ತಿದೆ.
ಬಳಿಕ ಚಾಲಕನಿಗೆ ಬೇಡಿ ತೋರಿಸಿ ರಕ್ತ ಚಂದನ ಸಮೇತ ವಾಹನ ಮತ್ತು ಚಾಲಕನನ್ನ ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ವಾಹನದಲ್ಲಿದ್ದ 13 ಲಕ್ಷ ಮೌಲ್ಯದ 21 ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆದು ಚಾಲಕನನ್ನ ಬೆದರಿಸಿ ಕಳಿಸಿದ್ದರು ಎಂದು ಹೇಳಲಾಗ್ತಿದೆ.
ಹೆದ್ದಾರಿ ಬದಿ ನಡೆದಿದ್ದ ಈ ನಾಟಕೀಯ ಬೆಳವಣಿಗೆ ಬಗ್ಗೆ ಕಿಡ್ನಾಪ್ ಅಂತಾ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಹೀಗಾಗಿ ಡಿಸೆಂಬರ್ 15 ರಂದು ನಡೆದಿದ್ದ ಘಟನೆಯ ಮಾಹಿತಿಯನ್ನು ಪಡೆದ ಹೊಸಕೋಟೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಎಲ್ಲೂ ಡಿಸೆಂಬರ್ 15 ರಂದು ನಡೆದ ಘಟನೆ ಸಂಬಂಧ ಕೇಸ್ ದಾಖಲಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೊಲೀಸರು ತನಿಖೆ ವೇಳೆ ಹೆದ್ದಾರಿ ಬದಿಯಲ್ಲಿರುವ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದಾಗ ಘಟನೆ ಸಂಬಂಧ ಸುಳಿವು ಸಿಕ್ಕಿತ್ತು. ವಾಹನದ ನಂಬರ್ ಪ್ಲೇಟ್ ಆಧಾರದ ಮೇಲೆ ಹೊಸಕೋಟೆ ಪೊಲೀಸರು ತನಿಖೆ ನಡೆಸಿದಾಗ ಅಕ್ರಮ ಬಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಹಲವು ವರ್ಷಗಳಿಂದ ಹೊಸಕೋಟೆ ಸುತ್ತಮುತ್ತ ಕೆಲಸ ಮಾಡಿದ್ದ ಇಬ್ಬರು ಕಾನ್ಸ್ಟೇಬಲ್ಗಳು ರಕ್ತ ಚಂದನ ಮತ್ತು ಗಾಂಜಾ ಸಾಗಣೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಮಾರು ವೇಷದಲ್ಲಿ ಸ್ಮಗ್ಲಿಂಗ್ ಕೇಸ್ ಗಳನ್ನ ಹಿಡಿದರೆ ಅಲ್ಪಸ್ವಲ್ಪ ಹಣ ಸಿಗುತ್ತೆ ಅಂತ ಡೈರೆಕ್ಟ್ ಡೀಲ್ಗೆ ಮುಂದಾಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಈಗ ತಾವೇ ಕಂಬಿ ಹಿಂದೆ ನಿಲ್ಲುವ ಪರಿಸ್ಥಿತಿ ತಂದುಕೊಂಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಿದೆ.