ಬೆಂಗಳೂರು: ಚುನಾವಣೆಯಲ್ಲಿ ಮತದಾರರಿಗೆ ಆಮೀಷವೊಡ್ಡಲು ಕೆಲ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಇಪ್ಪತ್ತು ರೂಪಾಯಿ ನೋಟುಗಳನ್ನೇ ಕೋಡ್ ವರ್ಡ್ ರೀತಿ ಬಳಸಿಕೊಂಡು ಹಣ ಹಂಚಿಕೆ ಮಾಡಿರುವ ಬಗ್ಗೆ ಎಫ್ಐಆರ್ ದಾಖಲಾಗಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಮತ್ತು ಅವರ ಬೆಂಬಲಿಗರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ದೊಡ್ಡ ಮಟ್ಟದ ಹಣದ ದಂಧೆಗೆ ಈ ಮಾರ್ಗ ಬಳಕೆಯಾಗುವುದು ಕೇಳಿ ಬಂದಿದೆ. ಅರ್ಧ ಅಥವಾ ಪೂರ್ತಿ ನೋಟನ್ನು ದಂಧೆಯ ರೂವಾರಿಗಳು ಹೇಳಿದವರಿಗೆ ತೋರಿಸಬೇಕು. ನೋಟಿನಲ್ಲಿರುವ ನಂಬರುಗಳು ಹೊಂದಾಣಿಕೆಯಾದರೆ ಮಾತ್ರ ಹಣದ ವರ್ಗಾವಣೆಯಾಗುತ್ತದೆ. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿಯೂ ಇಂಥಹದ್ದೇ ತಂತ್ರ ಮಾಡಲಾಗಿದೆ. ಕಬ್ಬನ್ ಪೇಟೆಯಲ್ಲಿ ದುಡ್ಡು ಹಂಚಲು ಈ ವಿಧಾನವೇ ಬಳಕೆಯಾಗಿದ್ದು, ಇಪ್ಪತ್ತು ರೂಪಾಯಿ ತೋರಿಸಿದರೆ ಎರಡು ಸಾವಿರ ರೂ ಹಣ ಸಿಗುತ್ತಿತ್ತು ಎಂದು ಆರೋಪಿಸಲಾಗಿದೆ.
ಬೆಳಗ್ಗೆ ಮತದಾರರಿಗೆ ಇಪ್ಪತ್ತು ರೂಪಾಯಿ ಹಂಚುತ್ತಿದ್ದ ಆರೋಪಿಗಳು ಅವರು ಹೇಳಿದವರ ಬಳಿ ಹೋಗಿ ಆ ನೋಟುಗಳನ್ನು ತೋರಿಸಲು ಸೂಚಿಸುತ್ತಿದ್ದರು. ಇಪ್ಪತ್ತು ರೂಪಾಯಿ ತೋರಿಸಿದರೆ ಎರಡು ಸಾವಿರ ಕೊಡಲಾಗುತ್ತಿತ್ತು. ಮತದಾರರ ಗುರುತಿನ ಚೀಟಿ ಇದ್ದವರಿಗೆ ಹೀಗೆ ಹಣ ಹಂಚುತ್ತಿದ್ದವರು ಪಕ್ಷೇತರ ಅಭ್ಯರ್ಥಿಯೊಬ್ಬರ ಕಡೆಯವರು ಎಂದು ಆರೋಪಿಸಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್ ಲೀಡರ್ ನೀಡಿರುವ ದೂರಿನನ್ವಯ ಕೃಷ್ಣಯ್ಯ ಶೆಟ್ಟಿ ಹಾಗೂ ಅವರ ಕಡೆಯವರಾದ ಚಂದ್ರಶೇಖರ್, ವಸಂತ್ ಕುಮಾರ್ ಹಾಗೂ ವೆಂಕಟೇಶ್ ಎಂಬಾತನ ಮೇಲೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಪ್ಪತ್ತು ರೂ ಮುಖಬೆಲೆಯ ಕೆಲ ನೋಟುಗಳನ್ನು ಜಪ್ತಿ ಮಾಡಲಾಗಿದೆ.