ಕರ್ನಾಟಕ

karnataka

ETV Bharat / state

ಕ್ವಾರಂಟೈನ್ ನಿಯಮ ಉಲ್ಲಂಘನೆ.. ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲು..

ಸುದ್ದಿ ವಾಹಿನಿಯ ಚರ್ಚೆಯಲ್ಲಿದ್ದ ವೇಳೆಯೇ ಪ್ರತಾಪ್ ತಾವು ವಾಹಿನಿಗೆ ಬರಲು ಕ್ವಾರಂಟೈನ್ ನಿಯಮಗಳನ್ನು ಮುರಿದಿರುವುದಾಗಿ ಯಾವುದೇ ಅಂಜಿಕೆ ಇಲ್ಲದೇ ಹೇಳಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಕರಣ ದಾಖಲಿಸಿದೆ ಎಂದು ಪ್ರಯಾಗ್ ತಿಳಿಸಿದ್ದಾರೆ..

FIR against Drone Pratap
ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲು

By

Published : Jul 19, 2020, 7:35 PM IST

ಬೆಂಗಳೂರು :ಸುದ್ದಿ ವಾಹಿನಿಗಳ ಸಂದರ್ಶನದಲ್ಲಿ ಭಾಗವಹಿಸುವ ಸಲುವಾಗಿ ಡ್ರೋನ್ ಪ್ರತಾಪ್ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದು, ಸದ್ಯ ಬಂಧನ ಭೀತಿಯಿಂದಾಗಿ ಪೊಲೀಸರು ಮತ್ತು ಕ್ವಾರಂಟೈನ್ ಸಿಬ್ಬಂದಿ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಡ್ರೋನ್ ಪ್ರತಾಪ್ ಕ್ವಾರಂಟೈನ್​​ಗೆ ಸಂಬಂಧಿಸಿದ ಎರಡು ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟೀಕರಣ ನೀಡಲು ಪ್ರತಾಪ್ ಜುಲೈ 16ರಂದು ಮನೆಯಿಂದ ಹೊರಗೆ ಹೋಗಿ, ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಟಿವಿ ವಾಹಿನಿಗಳ ಚರ್ಚೆ ಮತ್ತು ಸಂದರ್ಶನದಲ್ಲಿ ಭಾಗವಹಿಸಿದ್ದರು.

ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವುದು ಬಿಬಿಎಂಪಿಗೆ ಗೊತ್ತಾಗಿದೆ ಎಂದು ತಿಳಿಯುತ್ತಲೇ ಪ್ರತಾಪ್ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಇದು ಕೂಡ ಕ್ವಾರಂಟೈನ್ ನಿಯಮ ಉಲ್ಲಂಘನೆ ಎನಿಸಿಕೊಂಡಿದೆ.

ಎಫ್​ಆರ್​ಐ ಪ್ರತಿ

ಜುಲೈ 15ರಂದು ಹೈದರಾಬಾದ್​​ನಿಂದ ಹಿಂದಿರುಗಿದ್ದ ಪ್ರತಾಪ್ ಮರುದಿನವೇ (ಜುಲೈ 16) ಸುದ್ದಿ ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ಹೋಂ ಕ್ವಾರಂಟೈನ್ ಮುದ್ರೆ ಸ್ಪಷ್ಟವಾಗಿ ಕಾಣಿಸಿದೆ ಎಂದು ಪಶುವೈದ್ಯ ಮತ್ತು ವಿಧಿವಿಜ್ಞಾನ ತಜ್ಞರೂ ಆಗಿರುವ ಡಾ. ಪ್ರಯಾಗ್ ಹೆಚ್ ಎಸ್ ತಿಳಿಸಿದ್ದಾರೆ. ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ಧ ಮಾಹಿತಿ ನೀಡಲು ಮತ್ತು ದೂರು ದಾಖಲಿಸಲು ಪ್ರಯಾಗ್ ಅವರಿಗೆ ಸ್ಥಳೀಯಾಡಳಿತ ಅಧಿಕಾರ ನೀಡಿದೆ.

ಸುದ್ದಿ ವಾಹಿನಿಯ ಚರ್ಚೆಯಲ್ಲಿದ್ದ ವೇಳೆಯೇ ಪ್ರತಾಪ್ ತಾವು ವಾಹಿನಿಗೆ ಬರಲು ಕ್ವಾರಂಟೈನ್ ನಿಯಮಗಳನ್ನು ಮುರಿದಿರುವುದಾಗಿ ಯಾವುದೇ ಅಂಜಿಕೆ ಇಲ್ಲದೇ ಹೇಳಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಕರಣ ದಾಖಲಿಸಿದೆ ಎಂದು ಪ್ರಯಾಗ್ ತಿಳಿಸಿದ್ದಾರೆ. ಪ್ರತಾಪ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವುದು ಸರ್ಕಾರದ ಕೋಪಕ್ಕೆ ಕಾರಣವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದೇ ಹಿನ್ನೆಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಪ್ರಕರಣ ದಾಖಲಾಗಿರುವ ಹಿನ್ನೆಲೆ ಪೊಲೀಸರು ಮತ್ತು ಕ್ವಾರಂಟೈನ್ ಸಿಬ್ಬಂದಿ ಇಂದು ಅಂಜನಾಪುರದಲ್ಲಿರುವ ಪ್ರತಾಪ್ ಮನೆ ಬಳಿಗೆ ತೆರಳಿದ್ದರಾದರೂ, ಆತ ಅಲ್ಲಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪ್ರತಾಪ್ ಫೋನ್ ಸದ್ಯ ಸ್ವಿಚ್ ಆಫ್ ಆಗಿದೆ. ಕಡೆಯದಾಗಿ ಜ್ಞಾನ ಭಾರತಿ ವಿವಿ ಕ್ಯಾಂಪಸ್​​ನಲ್ಲಿದ್ದ ಬಗ್ಗೆ ಆತನ ಫೋನ್ ಲೋಕೇಷನ್ ತಿಳಿಸುತ್ತಿದೆ.

ಪ್ರತಾಪ್ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ. ನಮ್ಮ ಬಳಿ ಆತನ ಕರೆಗಳ ಮಾಹಿತಿ ಇವೆ. ಅದರಲ್ಲಿರುವ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದೇವೆ. ಎಲ್ಲರೂ ಸಹಕರಿಸುತ್ತಿದ್ದಾರೆ. ಆತ ಪತ್ತೆಯಾದ್ರೆ ಮೊದಲು ಸಾಂಸ್ಥಿಕ ಕ್ವಾರಂಟೈನ್​​ನಲ್ಲಿರಿಸಲಾಗುವುದು. ನಂತರ ನ್ಯಾಯಾಲಯದ ಸೂಚನೆಯಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದು ತಲಘಟ್ಟಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಮಪ್ಪ ಹೇಳಿದ್ದಾರೆ.

ABOUT THE AUTHOR

...view details