ಬೆಂಗಳೂರು:ನಗರದಲ್ಲಿ ನೆತ್ತರು ಹರಿದಿದೆ.ಕೊಟ್ಟ ಸಾಲ ವಾಪಸ್ ಕೇಳಿದ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಮಂಗಳವಾರ ತಡರಾತ್ರಿ ಬಾಣಸವಾಡಿ ಠಾಣಾ ವ್ಯಾಪ್ತಿಯ ಚಿಕ್ಕ ಬಾಣಸವಾಡಿ ಬಳಿ ನಡೆದಿದೆ. ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಶೇಖರ್ (29) ಕೊಲೆಯಾದ ವ್ಯಕ್ತಿ.
ಪ್ರಕರಣದ ವಿವರ:ಬಾಣಸವಾಡಿ ಸುತ್ತಮುತ್ತ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಶೇಖರ್ ಈ ಹಿಂದೆ ಮನೋಜ್ ಎಂಬಾತನಿಗೆ ಹಣ ನೀಡಿದ್ದನಂತೆ. ತಡರಾತ್ರಿ ಕುಡಿದ ಅಮಲಿನಲ್ಲಿ ಮನೋಜ್ ಬಳಿ ಕೊಟ್ಟ ಹಣ ವಾಪಾಸ್ ಕೊಡುವಂತೆ ಶೇಖರ್ ಕೇಳಿದ್ದಾನೆ. ಸ್ನೇಹಿತರ ಜತೆ ಬಂದಿದ್ದ ಮನೋಜ್ 'ಸಾಲ ವಾಪಸ್ ಕೊಡಲ್ಲ, ಏನ್ ಮಾಡ್ಕೊತಿಯೋ ಮಾಡ್ಕೋ' ಎಂದು ಶೇಖರ್ ಬಳಿ ಗಲಾಟೆ ಆರಂಭಿಸಿದ್ದ. ಈ ವೇಳೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಮನೋಜ್ ಹಾಗೂ ಆತನ ಸ್ನೇಹಿತರು ಶೇಖರ್ನ ಹೊಟ್ಟೆ ಭಾಗಕ್ಕೆ ಮೂರ್ನಾಲ್ಕು ಕಡೆಗಳಲ್ಲಿ ಚಾಕು ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಮೃತ ದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮನೋಜ್ ಹಾಗೂ ಆತನ ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ದ್ವಿಚಕ್ರ ವಾಹನ ಚೋರರ ಬಂಧನ:ಮತ್ತೊಂದೆಡೆ ದುಬಾರಿ ದ್ವಿಚಕ್ರ ವಾಹನಗಳನ್ನ ಕದ್ದು ನಗರದ ಹೊರವಲಯ, ಪಕ್ಕದ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಂಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಹಾಗೂ ಸಾಗರ್ ಬಂಧಿತ ಆರೋಪಿಗಳು. ಈ ಹಿಂದೆ ಮನೆಗಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ವೆಂಕಟೇಶ ಹಾಗೂ ಆತನ ಗ್ಯಾಂಗ್ ಜೈಲಿನಲ್ಲಿ ಹೊಸ ಟೀಂ ಸಿದ್ಧಪಡಿಸಿಕೊಂಡಿತ್ತು. ಜೈಲಿನಿಂದ ಹೊರಬರುತ್ತಿದ್ದಂತೆ ಮನೆಗಳ್ಳತನ ಬಿಟ್ಟು ಹೊಸೂರು, ಸರ್ಜಾಪುರ, ಅತ್ತಿಬೆಲೆ, ಶ್ರೀರಾಂಪುರ ಭಾಗದಲ್ಲಿ ಸುತ್ತಾಡುತ್ತಾ ದುಬಾರಿ ಬೆಲೆಯ ಡಾಮಿನರ್, ಬುಲೆಟ್, ಡ್ಯೂಕ್ ಸೇರಿದಂತೆ ಬೇರೆ ಬೇರೆ ದ್ವಿಚಕ್ರ ವಾಹನಗಳನ್ನ ಕದಿಯಲಾರಂಭಿಸಿತ್ತು. ಬಳಿಕ ಕದ್ದ ವಾಹನಗಳನ್ನ ಆರೋಪಿಗಳು ಕೋಲಾರ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ 10 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ.