ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಕೇಂದ್ರೀಕೃತ ಆಡಳಿತ ನಡೆಸುತ್ತಿದೆ. ಪಂಚ ಗ್ಯಾರಂಟಿಯ ಪೈಕಿ ನಾಲ್ಕು ಗ್ಯಾರಂಟಿಗಳು ಈಗಾಗಲೇ ಅನುಷ್ಠಾನವಾಗಿವೆ. ಆರ್ಥಿಕ ತೊಂದರೆಗಳ ಮಧ್ಯೆ ಹಣಕಾಸು ನಿರ್ವಹಿಸಿ ಇವುಗಳನ್ನು ಜಾರಿ ಮಾಡಲಾಗುತ್ತಿದೆ. ಇದರ ನಡುವೆ ಸರ್ಕಾರಕ್ಕೆ ಬರ ಬರೆ ಎಳೆದಿದೆ.
ರಾಜ್ಯ ಈ ಬಾರಿ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಒಟ್ಟು 236 ತಾಲೂಕುಗಳ ಪೈಕಿ 223 ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಸುಮಾರು 30 ಸಾವಿರ ಕೋಟಿ ರೂ.ಗೂ ಅಧಿಕ ಬರ ನಷ್ಟ ಅನುಭವಿಸಿದ್ದು, ಪರಿಹಾರ ಹಣ ಹೊಂದಿಸಲು ಕಸರತ್ತು ನಡೆಯುತ್ತಿದೆ.
3,118.52 ಕೋಟಿ ವಿತ್ತೀಯ ಕೊರತೆ:ಆರ್ಥಿಕ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ, ಈ ಬಾರಿ ಆರು ತಿಂಗಳಲ್ಲಿ ರಾಜ್ಯ 3,118.52 ಕೋಟಿ ರೂ. ವಿತ್ತೀಯ ಕೊರತೆ ಎದುರಿಸುತ್ತಿದೆ. ಅಂದರೆ ಒಟ್ಟು ರಾಜಸ್ವ ಸ್ವೀಕೃತಿಗಿಂತ ಒಟ್ಟು ವೆಚ್ಚವೇ ಹೆಚ್ಚು. ಒಟ್ಟು ಜಿಎಸ್‌ಡಿಪಿಗೆ ವಿತ್ತೀಯ ಕೊರತೆ ಪ್ರಮಾಣ 0.12%ರಷ್ಟು ಇದೆ. ಕಳೆದ 2022-23ನೇ ಸಾಲಿನ ಮೊದಲ ಆರು ತಿಂಗಳಲ್ಲಿ ವಿತ್ತೀಯ ಕೊರತೆ 1,685.59 ಕೋಟಿ ರೂ. ಮಾತ್ರ ಇತ್ತು.
ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಸ್ವಂತ ತೆರಿಗೆ ರಾಜಸ್ವ, ಸ್ವಂತ ತೆರಿಗೆಯೇತರ ರಾಜಸ್ವ, ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ, ಕೇಂದ್ರದ ಸಹಾಯಾನುದಾನ, ಸಾಲಗಳ ವಸೂಲಾತಿ, ಬಂಡವಾಳ ಜಮೆಗಳ ಮೂಲಕ ಒಟ್ಟು 1,05,243.58 ಕೋಟಿ ರೂ. ರಾಜಸ್ವ ಸ್ವೀಕೃತಿಯಾಗಿದೆ. ಬಂಡವಾಳ ವೆಚ್ಚ, ರಾಜಸ್ವ ವೆಚ್ಚ, ಬಡ್ಡಿ ಪಾವತಿ ಸೇರಿ ಒಟ್ಟು ರಾಜಸ್ವ ವೆಚ್ಚ ಸುಮಾರು 1,08,362 ಕೋಟಿ ರೂ.ಗೆ ತಲುಪಿದೆ.
ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟು ರಾಜಸ್ವ ವೆಚ್ಚ ಸುಮಾರು 98,070 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಗೆ ರಾಜಸ್ವ ವೆಚ್ಚ 86,798 ಕೋಟಿ ರೂ. ಆಗಿತ್ತು. ಈ ಆರ್ಥಿಕ ವರ್ಷದ ಆರು ತಿಂಗಳಲ್ಲಿ ಒಟ್ಟು ರಾಜಸ್ವ ವೆಚ್ಚ 11,272 ಕೋಟಿ ರೂ. ಹೆಚ್ಚಾಗಿದೆ. ರಾಜಸ್ವ ವೆಚ್ಚ ಸರ್ಕಾರಿ ನೌಕರರ ವೇತನ, ಪಿಂಚಣಿ, ಆಡಳಿತ ವೆಚ್ಚ, ಬಡ್ಡಿ, ಸಹಾಯಧನ ಒಳಗೊಂಡಿದೆ. ಪಂಚ ಗ್ಯಾರಂಟಿಯ ಕಾರಣದಿಂದ ರಾಜಸ್ವ ವೆಚ್ಚದಲ್ಲಿ ಈ ಬಾರಿ ಗಣನೀಯ ಏರಿಕೆಯಾಗಿದೆ.
ಬಂಡವಾಳ ವೆಚ್ಚ, ಬಡ್ಡಿ ಪಾವತಿ:ಪ್ರಸಕ್ತಆರ್ಥಿಕ ವರ್ಷದ ಆರು ತಿಂಗಳಲ್ಲಿ 10,292 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಖರ್ಚು ಮಾಡಲಾಗಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ 15,344 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಇತ್ತ 34,027 ಕೋಟಿ ರೂ. ಸಾಲದ ಮೇಲಿನ ಬಡ್ಡಿ ಪಾವತಿಸಬೇಕು. ಈ ಪೈಕಿ ಆರು ತಿಂಗಳಲ್ಲಿ ರಾಜ್ಯ ಸರ್ಕಾರ 13,739 ಕೋಟಿ ರೂ. ಬಡ್ಡಿ ಪಾವತಿ ಮಾಡಿದೆ. ಈ ಬಾರಿ ಆರು ತಿಂಗಳಲ್ಲಿ 1,191 ಕೋಟಿ ರೂ. ಸಾರ್ವಜನಿಕ ಸಾಲ ಎತ್ತುವಳಿ ಮಾಡಿದೆ. ಮುಂದಿನ ತ್ರೈಮಾಸಿಕಗಳಲ್ಲಿ ಹೆಚ್ಚಿನ ಸಾಲ ಎತ್ತುವಳಿ ಮಾಡಲಾಗುವುದು ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ಇದನ್ನೂ ಓದಿ:7ನೇ ರಾಜ್ಯ ವೇತನ ಆಯೋಗದ ಕಾಲಾವಧಿ ಮತ್ತೆ ವಿಸ್ತರಣೆ; ಮಾ.15, 2024 ವರೆಗೆ ವಿಸ್ತರಿಸಿ ಆದೇಶ