ಬೆಂಗಳೂರು:ಲಾಕ್ಡೌನ್ ಹಿನ್ನೆಲೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಈ ಹಿನ್ನೆಲೆ ದುಂದುವೆಚ್ಚ ಕಡಿತ, ಮಿತವ್ಯಯದ ಮೊರೆ ಹೋಗಿರುವ ಸರ್ಕಾರ ಕೆಲವು ಇಲಾಖೆಗಳ ವಿಲೀನ ಮತ್ತು ಅನಗತ್ಯ ಹುದ್ದೆಗಳನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ.
ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ರಚನೆಯಾಗಿರುವ ಸಚಿವ ಸಂಪುಟದ ಉಪಸಮಿತಿ ಮೊದಲ ಸಭೆ ನಡೆಸಿದ್ದು, ಈ ಸಂಬಂಧ ಚರ್ಚೆ ನಡೆಸಲಾಗಿದೆ. ಕೆಲ ಇಲಾಖೆಗಳ ವಿಲೀನ ಸಾಧ್ಯತೆ ಸಂಬಂಧ 15 ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವ ಇಲಾಖೆಯೊಂದಿಗೆ ಯಾವ ಇಲಾಖೆಯನ್ನು ವಿಲೀನಗೊಳಿಸಬಹುದು, ಅನಗತ್ಯವಾಗಿರುವ ಯಾವ ಹುದ್ದೆಗಳನ್ನು ರದ್ದುಗೊಳಿಸಬಹುದು ಎಂಬ ಕುರಿತು 15 ದಿನದಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಿದೆ.
ಈ ನಿಟ್ಟಿನಲ್ಲಿ ಮೂವರು ಐಎಎಸ್ ಅಧಿಕಾರಿಗಳಾದ ಮೌನೀಶ್ ಮೌದ್ಗಿಲ್, ಎಸ್.ಜಿ.ರವೀಂದ್ರ ಮತ್ತು ಏಕ್ ರೂಪ್ ಕೌರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಹಲವು ಇಲಾಖೆಗಳಲ್ಲಿ ಅನಗತ್ಯ ಹುದ್ದೆಗಳಿವೆ. ಕೆಲಸ ಇರುವ ಕಡೆ ಸಿಬ್ಬಂದಿ ಇಲ್ಲ. ಹೀಗಾಗಿ ಅವುಗಳನ್ನು ಸರಿಪಡಿಸುವ ಉದ್ದೇಶದಿಂದ ಸರ್ಕಾರವು ಇಲಾಖೆಗಳಲ್ಲಿನ ಮತ್ತು ಅನಗತ್ಯ ಹುದ್ದೆಗಳ ರದ್ದುಗೊಳಿಸುವ ಕ್ರಮಕ್ಕೆ ಮುಂದಾಗಿದೆ.