ಯಲಹಂಕ:ಕೊರೊನಾ ರೋಗದ ತೀವ್ರತೆ ಹೆಚ್ಚಿರುವ ಕಡೆ ಹೆಚ್ಚು ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಆಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬೋಯಿಂಗ್ ಸಂಸ್ಥೆಯು, 'ಸೆಲ್ಕೋ', 'ಡಾಕ್ಟರ್ಸ್ ಫಾರ್ ಯು' ಸಹಯೋಗದೊಂದಿಗೆ ಯಲಹಂಕದಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹಿಮ್ಮೆಟಿಸಲು ಸಹಾಯ ಮಾಡುವಂತೆ ಪ್ರಧಾನಿ ಮೋದಿಯವರು ಸ್ವಯಂ ಸೇವಾ ಸಂಘಗಳಿಗೆ ಮನವಿ ಮಾಡಿದ್ದರು. ಇದಕ್ಕೆ ದೇಶದಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಕೊರೊನಾ ಚಿಕಿತ್ಸೆಗಾಗಿ ಭಾರಿ ಪ್ರಮಾಣದ ಹಣ ಹರಿದು ಬಂದಿದೆ ಎಂದು ತಿಳಿಸಿದರು.
ಸಾಕಷ್ಟು ಜನ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ. ಕಲ್ಬುರ್ಗಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸ್ವಯಂಸೇವಕರು ಹೋಗಿ ದುಡಿಯುತ್ತಿದ್ದಾರೆ, ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಬರುವ ಸಾಧ್ಯತೆ ಇದ್ದು ಬೋಯಿಂಗ್ ಸಂಸ್ಥೆಯ ಡಾಕ್ಟರ್ಸ್ ಫಾರ್ ಯೂ ಆಸ್ಪತ್ರೆಯಲ್ಲಿ ವಿಶೇಷವಾದ ಪ್ರತ್ಯೇಕ ವಾರ್ಡ್ ಮಾಡಿರುವುದು ಖುಷಿ ತಂದಿದೆ ಎಂದರು.
ಹೈಟೆಕ್ ಆಸ್ಪತ್ರೆಗಳಲ್ಲಿ ಇರಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಈ ಆಸ್ಪತ್ರೆ ಹೊಂದಿದೆ. ಆಸ್ಪತ್ರೆಯ ಲೋಕಾರ್ಪಣೆಗಾಗಿ ಸದನಾಂದಗೌಡರು ನನಗಾಗಿ ಕಾಯವುದು ಬೇಡ ಬೇಗನೆ ಲೋಕಾರ್ಪಣೆ ಮಾಡಲಿ ಎಂದರು. ಇದೇ ಮಾದರಿ ಆಸ್ಪತ್ರೆಗಳನ್ನ ದೇಶದ ವಿವಿಧ ಭಾಗಗಳಲ್ಲಿ ಮಾಡುವಂತೆ ಕೇಂದ್ರ ಸರ್ಕಾರಕ್ಕೂ ಸಲಹೆ ನೀಡುವೆ ಎಂದು ಹೇಳಿದ್ರು.