ಬೆಂಗಳೂರು: ಅನಾರೋಗ್ಯಕ್ಕೆ ತುತ್ತಾಗಿರುವ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿರುವ ಪತ್ನಿ ವಿರುದ್ಧ ಸುಳ್ಳು ಕೇಸ್ ಹಾಕಿದ್ದ ಪತಿಗೆ ಹೈಕೋರ್ಟ್ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ತನ್ನ ಮಗಳನ್ನು ಪತ್ನಿ ಬಂಧನದಲ್ಲಿಟ್ಟಿದ್ದಾಳೆ. ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಸುಳ್ಳು ಆರೋಪ ಮಾಡಿ ನಗರದ ಕಾಡುಬೀಸನಹಳ್ಳಿ ನಿವಾಸಿ ಗೌರವ್ ರಾಜ್ ಜೈನ್ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಎಂ.ಜಿ ಉಮಾ ಅವರಿದ್ಧ ವಿಭಾಗೀಯ ಪೀಠ ಅರ್ಜಿದಾರನಿಗೆ ದಂಡ ವಿಧಿಸಿ ಆದೇಶಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಗೌರವ್ ರಾಜ್ ಜೈನ್ ನಿಷ್ಪ್ರಯೋಜಕ ಹಾಗೂ ದುರುದ್ದೇಶಪೂರ್ವಕ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಮಗು ತಾಯಿಯ ಆರೈಕೆಯಲ್ಲಿ ಸುರಕ್ಷಿತವಾಗಿದೆ. ಈ ವಿಚಾರ ತಿಳಿದೂ ಪತಿ ಅರ್ಜಿ ಸಲ್ಲಿಸಿದ್ದಾನೆ. ಮಗು ನೋಡಬೇಕಿದ್ದಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಅದು ಬಿಟ್ಟು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಹೈಕೋರ್ಟ್ ಸಮಯ ಹಾಳು ಮಾಡಿದ್ದಾನೆ ಎಂದು ಬೇಸರ ಹೊರಹಾಕಿತು.
ಅಲ್ಲದೇ, ಹೇಬಿಯಸ್ ಕಾರ್ಪಸ್ ನಂತಹ ಅರ್ಜಿಗಳನ್ನು ಯಾವುದೇ ವ್ಯಕ್ತಿ ಅಕ್ರಮ ಬಂಧನದಲ್ಲಿದ್ದಾಗ ಆತನ ಬಿಡುಗಡೆಗೆ ಕೋರಿ ಸಲ್ಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಮಗು ತಾಯಿಯ ಬಳಿ ಇದೆ ಎಂಬುದು ತಿಳಿದೂ ಅರ್ಜಿ ಸಲ್ಲಿಸಲಾಗಿದೆ. ತಾಯಿ-ಮಗು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರನ್ನು, ಆಡಳಿತವನ್ನು ಅನಗತ್ಯವಾಗಿ ಬಳಕೆ ಮಾಡಿಕೊಳ್ಳುವಂತಾಗಿದೆ. ಇಂತಹ ದುರುದ್ದೇಶಪೂರಿತ ಅರ್ಜಿಗಳನ್ನು ದಾಖಲಿಸುವ ಪ್ರವೃತ್ತಿಯನ್ನು ಹತ್ತಿಕ್ಕಬೇಕಿದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರ ಗೌರವ್ ರಾಜ್ ಜೈನ್ ಗೆ 50 ಸಾವಿರ ದಂಡ ವಿಧಿಸಿದೆ. ಅಲ್ಲದೇ, ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಪೊಲೀಸ್ ಕಲ್ಯಾಣ ನಿಧಿಗೆ ಪಾವತಿಸಬೇಕು. ದಂಡ ಪಾವತಿಸಲು ವಿಫಲವಾದರೆ ಜಿಲ್ಲಾಧಿಕಾರಿ ಆಸ್ತಿ ಜಪ್ತಿ ಮಾಡಬಹುದು ಎಂದು ಆದೇಶಿಸಿದೆ.