ಬೆಂಗಳೂರು: ''ವಿಧಾನಸಭೆ ಕಲಾಪ ಫೆ.24ರವರೆಗೆ ನಡೆಯಲಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ.17ರಂದು ಶುಕ್ರವಾರ ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ'' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಮಂಗಳವಾರ ಪ್ರಕಟಿಸಿದ್ದಾರೆ. ಶೂನ್ಯ ವೇಳೆಯ ನಂತರ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಸ್ಪೀಕರ್ ಸದನದಲ್ಲಿ ತಿಳಿಸಿದರು.
ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮ:''ಫೆ. 20ರಂದು ಸಂಜೆ 4.30ಕ್ಕೆ ವಿಧಾನಸೌಧದ ಮುಂಭಾಗ 15ನೇ ವಿಧಾನಸಭೆಯ ಸದಸ್ಯರ ಛಾಯಾಚಿತ್ರ ತೆಗೆಸಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ. ಕೊನೆ ಅಧಿವೇಶನವಾಗಿರುವ ಕಾರಣ ಪ್ರತಿಯೊಬ್ಬ ಶಾಸಕರು ಕಡ್ಡಾಯವಾಗಿ ಛಾಯಾಚಿತ್ರ ತೆಗೆಸಿಕೊಳ್ಳಲು ಭಾಗವಹಿಸಬೇಕು'' ಎಂದು ಮನವಿ ಮಾಡಿದರು. ನಿಗದಿತ ಕಾರ್ಯಕ್ರಮಗಳು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇದ್ದರೆ, ಒಂದು ದಿನದ ಮಟ್ಟಿಗೆ ಮುಂದೂಡಿ, ಕಾರಣ ನೀಡಿ ಗೈರು ಹಾಜರಾಗಬಾರದು. ಇದು ಕೊನೆಯ ಅಧಿವೇಶನ ಆಗಿರುವುದರಿಂದ ಸದಸ್ಯರು ಕಡೇ ಪಕ್ಷ ಫೋಟೊ ತೆಗೆಸಿಕೊಳ್ಳುವ ಕಾರ್ಯಕ್ರಮಕ್ಕಾದರೂ ಬನ್ನಿ ಎಂದು ಸಲಹೆ ಮಾಡಿದರು.
ಇಂದು ಮತ್ತು ನಾಳೆ ರಾಜ್ಯಪಾಲರು ಭಾಷಣದ ಮೇಲೆ ಚರ್ಚೆಗೆ ಸಮಯ ನಿಗದಿ ಮಾಡಲಾಗಿದೆ. ಫೆ.16ರಂದು ಪ್ರಶ್ನೋತ್ತರ ಅವಧಿ ಮುಗಿದ ನಂತರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡಲಿದ್ದಾರೆ.
ಫೆ.20, 21, 22ಕ್ಕೆ ಬಜೆಟ್ ಮೇಲಿನ ಚರ್ಚೆ: ''ಬಜೆಟ್ ಮಂಡನೆಯಾದ ನಂತರ ಫೆ.20, 21, 22ರಂದು ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಫೆ.23ರಂದು ಪ್ರಶ್ನೋತ್ತರ ಅವಧಿ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಬಜೆಟ್ಗೆ ಅಂಗೀಕಾರ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ನಿಗದಿಯಾಗಿರುವಂತೆ ಫೆ.24 ಅಧಿವೇಶನದ ಕೊನೆಯ ದಿನ'' ಎಂದು ತಿಳಿಸಿದರು.