ಬೆಂಗಳೂರು: ರಾಯಚೂರು ತಾಲ್ಲೂಕಿನ ಬೋಳಮಾನದೊಡ್ಡಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಹೇಳಿದರು. ವಿಕಾಸಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಅವರು ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳು ಭಾಗವಹಿಸಿದ್ದರು.
ಈ ಯೋಜನೆಯಿಂದ ಸುಮಾರು 6,464 ಹೆಕ್ಟೇರ್ಗೆ ನೀರಾವರಿ ಹಾಗೂ ಕೆರೆಗಳನ್ನು ತುಂಬಿಸಬಹುದಾಗಿದೆ. ಕೃಷ್ಣಾ ನದಿಯ ನೀರನ್ನು ಬಳಸಿಕೊಳ್ಳುವ ಮೂಲಕ ರೈತರ ಬೆಳೆಗೆ ಹಾಗೂ ಜನರಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಬಹುದಾಗಿದೆ. ಈ ಬಗ್ಗೆ ತಾಂತ್ರಿಕ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು. ಇದೇ ವೇಳೆ ಮಸ್ಕಿ ವಿಧಾನಸಭಾ ಕ್ಷೇತ್ರದ 5ಎ ಕಾಲುವೆಯ ಪ್ರಸ್ತಾವನೆಯ ಕುರಿತು ಚರ್ಚಿಸಲಾಯಿತು.
ತಿಂಗಳಾಂತ್ಯಕ್ಕೆ ಭಾಗಮಂಡಲ ಸೇತುವೆ ಕಾರ್ಯ ಮುಕ್ತಾಯಕ್ಕೆ ಗಡುವು: ಅಪೂರ್ಣಗೊಂಡಿರುವ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯನ್ನು ಜನವರಿ ತಿಂಗಳಾಂತ್ಯಕ್ಕೆ ಮುಗಿಸುವಂತೆ ಕಾವೇರಿ ಜಲ ನಿಗಮ ನಿಯಮಿತದ ಅಧಿಕಾರಿಗಳಿಗೆ ಗಡುವು ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.