ಬೆಂಗಳೂರು:ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ನಡೆಸಲು ರಾಷ್ಟ್ರೀಯ ರೈತ ನಾಯಕರು ಆಗಮಿಸಿದ್ದು, ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಶಿವಮೊಗ್ಗಕ್ಕೆ ತೆರಳಿದರು.
ಕೇಂದ್ರ ರೈತ ನಾಯಕರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ ಹಾಗೂ ರಾಜ್ಯ ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಚುಕ್ಕಿ ನಂಜುಂಡಸ್ವಾಮಿ, ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರು ಸಾಥ್ ನೀಡಿದರು.
ರಾಜ್ಯದಲ್ಲಿ ಇಂದಿನಿಂದ ರೈತ ಮಹಾಪಂಚಾಯತ್ ಆರಂಭವಾಗಲಿದ್ದು, ಕೇಂದ್ರದ ಮೂರು ರೈತ ವಿರೋಧಿ ಶಾಸನಗಳ ಬಗ್ಗೆ ಜನಜಾಗೃತಿ ಮೂಡಿಸಲಿದ್ದಾರೆ. ಇಂದಿನಿಂದ ಮೂರು ದಿನ ರಾಜ್ಯ ಪ್ರವಾಸ ಮಾಡಿ, ರೈತರಲ್ಲಿ ಅರಿವು ಮೂಡಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಬಡಗಲಪುರ ನಾಗೇಂದ್ರ, ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ, ಕಳೆದ ನಾಲ್ಕು ತಿಂಗಳಿಂದ ಹೋರಾಟ ನಡೆಯುತ್ತಿದೆ. ಇದರ ಭಾಗವಾಗಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಮೂರು ದಿನದ ರಾಜ್ಯ ಪ್ರವಾಸ ಕೈಗೊಂಡು ಇಂದು ಶಿವಮೊಗ್ಗ, ನಾಳೆ ಹಾವೇರಿ ಹಾಗೂ ಸೋಮವಾರ ನಗರದ ಬೃಹತ್ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ರೈತರ ಹೋರಾಟದ ಕೊಂಡಿಯನ್ನು ಗಟ್ಟಿಮಾಡುವ ಹೊಸ ಮುನ್ನುಡಿ ಬರೆಯಲಾಗುತ್ತಿದೆ ಎಂದರು.