ಬೆಂಗಳೂರು:ಕೊರೊನಾ ಸೋಂಕು ಜನರನ್ನು ಸಂಕಷ್ಟಕ್ಕೆ ದೂಡಿದೆ. ಅಂಥದ್ರಲ್ಲೂ ಒಂದು ಕಡೆ ಟೆಸ್ಟ್ ಮಾಡಿಸಿದ್ರೆ ಪಾಸಿಟಿವ್, ಇನ್ನೊಂದು ಕಡೆ ಪರೀಕ್ಷೆ ಮಾಡಿಸಿದ್ರೆ ನೆಗೆಟಿವ್ ರಿಪೋರ್ಟ್ ಬಂದ್ರೆ ಜನರ ಪರಿಸ್ಥಿತಿ ಏನಾಗಬೇಡಾ ಹೇಳಿ. ಇಂಥದ್ದೇ ಸಂಕಟದಲ್ಲಿ ಬೆಂಗಳೂರಿನ ಕುಟುಂಬವೊಂದು ಸಿಲುಕಿದೆ.
ಖಾಸಗಿ ಆಸ್ಪತ್ರೆಗೆ ಹೋದ್ರೆ ಕೊರೊನಾ ಪಾಸಿಟಿವ್, ಸರ್ಕಾರಿ ಲ್ಯಾಬ್ಗೆ ಹೋದ್ರೆ ನೆಗೆಟಿವ್ : ಮಗುವಿನ ಪೋಷಕರು ಕಂಗಾಲು - ಸುಗುಣ ಆಸ್ಪತ್ರೆ ಬೆಂಗಳೂರು
ಕೊರೊನಾ ಸಂಕಷ್ಟದ ಸಮಯದಲ್ಲೂ ಲಾಭ ಪಡೆಯಲು ಖಾಸಗಿ ಆಸ್ಪತ್ರೆಗಳು ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಕೊರೊನಾವನ್ನು ಒಂದು ದಂಧೆ ತರಹ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ರೋಗಿಗಳ ಬಾಳಲ್ಲಿ ಚೆಲ್ಲಾಟ ಆಡ್ತಿವೆ ಅನ್ನೋ ಆರೋಪ ಎದುರಿಸುತ್ತಿವೆ. ಈಗ ಇನ್ನೊಂದು ಆಸ್ಪತ್ರೆ ಕೂಡ ಇಂಥದ್ದೇ ಆಪಾದನೆಗೆ ಗುರಿಯಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದು ಗಂಭೀರ ಆರೋಪಕ್ಕೆ ತುತ್ತಾಗಿದೆ. ರಾಜಾಜಿನಗರದಲ್ಲಿರುವ ಈ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದವರ ರಿಪೋರ್ಟ್ ಪಾಸಿಟಿವ್ ಬಂದಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 4 ವರ್ಷದ ಮಗುವಿಗೆ ಈ ಆಸ್ಪತ್ರೆಯವರು ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದಾರೆ. ಆದರೆ ಸರ್ಕಾರಿ ಲ್ಯಾಬ್ನಲ್ಲಿ ಟೆಸ್ಟ್ ಮಾಡಿಸಿದಾಗ ಮಗು, ತಂದೆ-ತಾಯಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ಮಗುವಿಗೆ ಕೊರೊನಾ ಪಾಸಿಟಿವ್ ಇಲ್ಲದಿದ್ದರೂ ಪಾಸಿಟಿವ್ ಇದೆ ಎಂದು ಹೇಳಿ ಖಾಸಗಿ ಆಸ್ಪತ್ರೆಯವರು ಅಡ್ಮಿಟ್ ಮಾಡಿಕೊಂಡಿದ್ದಾರೆ ಎಂದು ಮಗುವಿನ ತಾಯಿ ಆರೋಪ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆ ವಿರುದ್ಧ ತಾಯಿ ರಾಜಲಕ್ಷ್ಮಿ ಗಂಭೀರ ಆರೋಪ ಮಾಡಿದ್ದು, ಈ ಆಸ್ಪತ್ರೆ ವಿರುದ್ಧ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ಮೆಡಿಕಲ್ ಕೌನ್ಸಿಲ್ಗೆ ರಾಜಲಕ್ಷ್ಮಿ ದೂರು ನೀಡಲು ಮುಂದಾಗಿದ್ದಾರೆ.