ಬೆಂಗಳೂರು: ನಿವೇಶನ ಕೊಡಿಸುವುದಾಗಿ ಹೇಳಿ ಸುಮಾರು ಇನ್ನೂರು ಮಂದಿಗೆ ಆತ ವಂಚಿಸಿದ್ದಾನೆ. ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ಅದಕ್ಕೆ ಅವಮಾನ ಮಾಡಿದ್ದಾರೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆರೋಪಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಹೋರಾಟಗಾರನ ಅಸಲಿ ಮುಖವಾಡ ಇದೀಗ ಬಯಲಾಗಿದೆ. ನಿವೇಶನ ಕೊಡಿಸುವುದಾಗಿ ಹೇಳಿ ಜನರ ಬಳಿ 3ರಿಂದ 6 ಲಕ್ಷ ರೂ.ವರೆಗೆ ವಸೂಲಿ ಮಾಡಿದ್ದು, 2012ರಲ್ಲಿ ಸುಮಾರು 200 ಜನರಿಗೆ ವಂಚಿಸಿದ್ದಾರೆ ಎಂದು ದೂರಿದರು.
ವಿಜಯನಗರದ ಆರ್ಪಿಸಿ ಬಡಾವಣೆಯ ವೃದ್ಧರೊಬ್ಬರಿಗೆ ಇದೇ ರೀತಿ ಹಣ ಪಡೆದು ವಂಚಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದರೂ ಎಫ್ಐಆರ್ ಆಗದಂತೆ ನೋಡಿಕೊಂಡರು. ಆಗ ಇದ್ದ ಸಿದ್ದರಾಮಯ್ಯ ಸರ್ಕಾರ ಅವರಿಗೆ ಬೆಂಬಲಿಸಿತ್ತು. ಜೊತೆಗೆ ಅವರ ಮೇಲೆ ಗೂಂಡಾಗಿರಿ ಮಾಡಿದ್ದಾರೆ ಗಂಭೀರ ಆರೋಪ ಮಾಡಿದರು.
ಆತನೊಬ್ಬ ನಕಲಿ ಹೋರಾಟಗಾರ. ಹಸಿರು ಶಾಲಿಗೆ ಇರುವ ಪಾವಿತ್ರ್ಯತೆಯನ್ನು ಅವರು ಹಾಳು ಮಾಡಿದ್ದಾರೆ. ನಾನು ಗದ್ದೆ ನಾಟಿ ಮಾಡಿದ್ದೇನೆ, ಟ್ರ್ಯಾಕ್ಟರ್ ಓಡಿಸಿದ್ದೇನೆ, ಭತ್ತದ ಕೆಲಸ ಮಾಡಿದ್ದೇನೆ. ಈ ನಕಲಿ ಹೋರಾಟಗಾರ ಯಾವತ್ತಾದರೂ ಹೊಲ ಉತ್ತಿದ್ದಾರಾ? ಅವರ ಆದಾಯದ ಮೂಲ ಬಹಿರಂಗ ಮಾಡಲಿ ಎಂದು ಒತ್ತಾಯಿಸಿದರು.
ಇದರ ವಿಚಾರವಾಗಿ ಕೃಷಿ ಮತ್ತು ಕಂದಾಯ ಸಚಿವರ ಬಳಿ ಮಾತಾಡುತ್ತೇನೆ. ಅವರ ಆದಾಯದ ಬಗ್ಗೆ ತನಿಖೆ ಮಾಡಿಸಲು ಒತ್ತಾಯ ಮಾಡುತ್ತೇನೆ ಎಂದರು.