ಬೆಂಗಳೂರು :ಆನ್‌ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ನಡೆಸುತ್ತಿದ್ದ ವಿವಿಧ ಕಂಪನಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿದ್ದ 5.87 ಕೋಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಆನ್‌ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಂಪನಿಗಳ ವಿರುದ್ಧ ಡಿಜಿಜಿಐ (ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ನಿರ್ದೇಶಕರು) ಕಚೇರಿಗೆ ಬಂದ ದೂರಿನನ್ವಯ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಹಣ ವರ್ಗಾವಣೆ ಆರೋಪವಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಯದ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದರು.
ಆನ್‍ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಕೆಲ ಕಂಪನಿಗಳು ಸಾರ್ವಜನಿಕರಿಗೆ ವಂಚನೆ ಎಸಗುತ್ತಿದ್ದವು. ಕಂಪನಿಯನ್ನ ಸೃಷ್ಟಿಸಿದ್ದ ಆರೋಪಿಗಳಾದ ಶ್ಯಾಮಲಾ ಎನ್ ಹಾಗೂ ಉಮರ್ ಫಾರೂಕ್ ಬೇರೆ ಬೇರೆ ವ್ಯಕ್ತಿಗಳ ದಾಖಲಾತಿಗಳನ್ನು ಬಳಸಿ ವಿವಿಧ ಹೆಸರುಗಳಲ್ಲಿ ಆ ಕಂಪನಿಗಳನ್ನ ತೆರೆದಿರುವುದು, ಮತ್ತು ಕಂಪನಿಯ ಎಚ್ಆರ್ ಮ್ಯಾನೇಜರ್ ಅನೇಕ ಸಿಮ್ ಕಾರ್ಡ್‌ಗಳನ್ನ ಖರೀದಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಅವುಗಳನ್ನ ಲಿಂಕ್ ಮಾಡಿರುವುದು ಇ. ಡಿ ತನಿಖೆಯಲ್ಲಿ ಬಯಲಾಗಿತ್ತು.
40 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಜಪ್ತಿ : ಪ್ರಕರಣವೊಂದರಲ್ಲಿ ಉದ್ಯಮಿ ಶೀತಲ್ ಕುಮಾರ್ ಮನೆರೆ, ಶೀತಲ್ ಜಿನೇಂದ್ರ ಮಗ್ದುಮ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಸೇರಿದ 40.22 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು (ಜುಲೈ 29-2023) ಹಾಕಿಕೊಂಡಿತ್ತು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿರುವ ಜಮೀನು, ವಾಣಿಜ್ಯ ಸಂಕೀರ್ಣ, ಗಾಳಿ ಗಿರಣಿ, ವಸತಿ ಸಮುಚ್ಚಯ ಮತ್ತು ಮನೆ ಸೇರಿದಂತೆ ಒಟ್ಟು 12 ಸ್ಥಿರಾಸ್ತಿಗಳನ್ನ ಜಪ್ತಿ ಮಾಡಲಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ತಿಳಿಸಿತ್ತು.
ಉದ್ಯಮಿ ಸಂಜಯ್ ಧನ್‌ಚಂದ್ ಘೋಡಾವತ್ ನೀಡಿದ ದೂರಿನನ್ವಯ 2021ರಲ್ಲಿ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ಆರೋಪಿಗಳು ಸಂಜಯ್ ಧನ್‌ಚಂದ್ ಘೋಡಾವತ್ರಿಂದ ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ 525 ಕೋಟಿ ರೂ. ಹೂಡಿಕೆ ಮಾಡಿಸಿದ್ದರು. ನಂತರ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳು, ಕುಟುಂಬ ಸದಸ್ಯರ ಖಾತೆಗಳಿಗೆ ವರ್ಗಾಯಿಸಿದ್ದರು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿತ್ತು.
ವಿನಯ್ ಪಾಠಕ್ ಬಂಧನ :ಭ್ರಷ್ಟಾಚಾರ ಪ್ರಕರಣ ಸಂಬಂಧ ಕಾನ್ಪುರ ವಿಶ್ವವಿದ್ಯಾಲಯದ ಉಪಕುಲಪತಿ ವಿನಯ್ ಪಾಠಕ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಡೇವಿಡ್ ಮರಿಯೋ ಡೆನ್ನಿಸ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಆಗ್ರಾ ವಿಶ್ವವಿದ್ಯಾಲಯದ ಎಂಬಿಬಿಎಸ್ ಮತ್ತು ಬಿಎಎಂಎಸ್ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವ ಬಗ್ಗೆ ಬಂಧಿಸಿರುವುದಾಗಿ ತಿಳಿದುಬಂದಿತ್ತು. ಡೇವಿಡ್ ವಿರುದ್ಧ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಕಳೆದ ಜೂನ್ 28 ರಂದು ಆಗ್ರಾ, ಲಖನೌ, ಕಾನ್ಪುರ್, ಕಾಸ್ಗಂಜ್, ಫಿರೋಜಾಬಾದ್, ದೆಹಲಿಯ ವಿವಿದೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ :ಇಡಿಯಿಂದ ಉದ್ಯಮಿಗಳ 40 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಜಪ್ತಿ!