ಬೆಂಗಳೂರು: ಕಂದಾಯ ಇಲಾಖೆಯ ತಹಶೀಲ್ದಾರ್, ಎಸಿ, ಡಿಸಿ ಸೇರಿದಂತೆ ರಾಜ್ಯದ ಎಲ್ಲಾ ಅರೆನ್ಯಾಯಿಕ ಪ್ರಾಧಿಕಾರಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ನಿಂದಾಗಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ ಎಂಬ ತಹಶೀಲ್ದಾರ್ ಒಬ್ಬರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಯಾವೆಲ್ಲ ಅರೆನ್ಯಾಯಿಕ ಪ್ರಾಧಿಕಾರಗಳು ಮತ್ತು ಮೇಲ್ಮನವಿ ನ್ಯಾಯಾಧಿಕರಣಗಳಿವೆಯೋ ಅವೆಲ್ಲಕ್ಕೂ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಬೇಕು. ತುರ್ತು ಅಗತ್ಯವಿರುವ ಕಡೆ ಆದ್ಯತೆ ಮೇರೆಗೆ ವಿಸಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದೆ.
ಭೂ ಕಂದಾಯ ಕಾಯ್ದೆ-1964ರ ಪ್ರಕಾರ ಕಂದಾಯ ಇಲಾಖೆಯ ಹಲವು ಅಧಿಕಾರಿಗಳಿಗೆ ಅರೆನ್ಯಾಯಿಕ ಅಧಿಕಾರ ಇದೆ. ಇವರು ಭೂ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುತ್ತಾರೆ. ಮುಖ್ಯವಾಗಿ ಈ ನ್ಯಾಯಿಕ ಪ್ರಾಧಿಕಾರಗಳು ಜನಸಾಮಾನ್ಯರಿಗೆ ಅಗತ್ಯವಾಗಿವೆ. ಹೀಗಾಗಿ ಇಲ್ಲಿನ ಪ್ರಕರಣಗಳ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಬೇಕು. ಈ ಸಂಬಂಧ ಕಂದಾಯ ಇಲಾಖೆ ವಿಸಿ ಸೌಲಭ್ಯ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಹಣಕಾಸು ಇಲಾಖೆ ಒಂದು ತಿಂಗಳಲ್ಲಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿ ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿತು.