ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆ (ಎನ್‌ಆರ್‌ಸಿ) ಬೆಂಬಲಿಸಿದ ಕಾರಣಕ್ಕೆ ಮಂಗಳೂರು ಮೂಲದ ಶೈಲೇಶ್ ಕುಮಾರ್ ಹೆಸರಿನಲ್ಲಿ ಅನಾಮಿಕರು ನಕಲಿ ಫೇಸ್ಬುಕ್ Facebook ಖಾತೆ ಪ್ರಾರಂಭಿಸಿ ಸೌದಿ ಅರೇಬಿಯಾದ ದೊರೆ ಬಗ್ಗೆ ಅವಹೇಳನಕಾರಿ ಹೇಳಿಕೆ ದಾಖಲಿಸಿದ್ದ ಪ್ರಕರಣದಲ್ಲಿ ತನಿಖೆಗೆ ಸೂಕ್ತ ಸಹಕಾರ ನೀಡಿದಿದ್ದಲ್ಲಿ ಭಾರತದಲ್ಲಿ ಫೇಸ್ಬುಕ್ ಕಾರ್ಯಾಚರಣೆ ಬಂದ್ ಮಾಡಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಅನಾಮಧೇಯ ವ್ಯಕ್ತಿಯೊಬ್ಬರು ನಕಲಿ ಫೇಸ್ಬುಕ್ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣ ಸಂಬಂಧ ಸೌದಿ ಅರೇಬಿಯಾ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಅಲ್ಲಿಯೇ ಜೈಲುವಾಸ ಮಾಡುತ್ತಿರುವ ಮಂಗಳೂರಿನ ಬಿಕರನಕಟ್ಟೆ ನಿವಾಸಿ ಶೈಲೇಶ್ ಕುಮಾರ ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಈ ಎಚ್ಚರಿಕೆ ನೀಡಿದೆ.
ಜೊತೆಗೆ, ಘಟನೆ ಕುರಿತು ಸೂಕ್ತ ಮಾಹಿತಿ ಒಳಗೊಂಡ ವರದಿಯನ್ನು ಫೇಸ್ಬುಕ್ ಸಂಸ್ಥೆ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ನೀಡಬೇಕು. ಭಾರತೀಯ ಪ್ರಜೆಯು ಸುಳ್ಳು ಪ್ರಕರಣದಲ್ಲಿ ವಿದೇಶದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದೆ. ಮಂಗಳೂರು ಪೊಲೀಸರು ಸಹ ಈ ಪ್ರಕರಣ ಸಂಬಂಧ ಸಮರ್ಪಕ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಏನು?:ಮಂಗಳೂರಿನ ಬಿಕರನಕಟ್ಟೆ ನಿವಾಸಿ ಶೈಲೇಶ್ ಕುಮಾರ್ (45) ಕಳೆದ 25 ವರ್ಷಗಳಿಂದ ಸೌದಿ ಅರೇಬಿಯಾದ ಅಲ್ಕುಬರ್ ಪ್ರದೇಶದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಪತ್ನಿ ಮತ್ತು ಮಕ್ಕಳು ಬಿಕರನಕಟ್ಟೆಯಲ್ಲಿ ವಾಸ ಮಾಡುತ್ತಿದ್ದರು. ಕೇಂದ್ರ ಸರ್ಕಾರ ರೂಪಿಸಿದ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ಬೆಂಬಲಿಸಿ 2019ರಲ್ಲಿ ಸೌದಿ ಅರೇಬಿಯಾದಲ್ಲಿ ಶೈಲೇಶ್ ಫೇಸ್ಬುಕ್ ಪೋಸ್ಟ್ ಹಾಕಿದ್ದರು. ಇದರಿಂದ ಕುಪಿತಗೊಂಡಿದ್ದ ಅನಾಮಿಕರಿಂದ ಶೈಲೇಶ್‌ಗೆ ಬೆದರಿಕೆ ಕರೆ ಬಂದಿತ್ತು. ಹಾಗಾಗಿ ತಮ್ಮ ಫೇಸ್ಬುಕ್ ಖಾತೆಯನ್ನು ಶೈಲೇಶ್ ರದ್ದು ಮಾಡಿದ್ದರು. ಆದರೆ, 2020ರ ಫೆಬ್ರವರಿಯಲ್ಲಿ ಶೈಲೇಶ್ ಕುಮಾರ್ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ನಕಲಿ ಫೇಸ್ಬುಕ್ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ, ಆತನ ಜಾತಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು.