ಕಲಬುರಗಿ/ಬೆಂಗಳೂರು: ಗೂಂಡಾ ಕಾಯ್ದೆಯಡಿ ಆರೋಪಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ವಶಕ್ಕೆ ಪಡೆಯಲಾಗುತ್ತಿದೆ ಎಂಬ ಅಂಶವನ್ನು ಅವರಿಗೆ ತಿಳಿಯುವ ಭಾಷೆಯಲ್ಲಿ ವಿವರಣೆ ನೀಡಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ಪತಿಯನ್ನು ಬಂಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಆರೋಪಿಯ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ರಾಜೇಶ್ ರೈ ಅವರಿದ್ದ ಹೈಕೋರ್ಟ್ನ ಕಲಬುರಗಿ ವಿಭಾಗೀಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಿ ತಕ್ಷಣ ಬಿಡುಗಡೆಗೆ ಆದೇಶಿಸಿದೆ. ಜೊತೆಗೆ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಕೇವಲ 3ನೇ ತರಗತಿವರೆಗೆ ಓದಿದ್ದಾರೆ, ಅವರಿಗೆ ಇಂಗ್ಲಿಷ್ ತಿಳಿದಿಲ್ಲ. ಅಂತಹ ಸಂದರ್ಭದಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು ಆತನಿಗೆ ತಿಳಿದಿರುವ ಭಾಷೆಯಲ್ಲೇ ದಾಖಲೆಗಳನ್ನು ಒದಗಿಸಬೇಕಾದದ್ದು ಆದ್ಯ ಕರ್ತವ್ಯ. ಹಾಗೆ ದಾಖಲೆ ಒದಗಿಸಿದರೆ ಆ ವ್ಯಕ್ತಿ ಸರ್ಕಾರದ ಸಲಹಾ ಮಂಡಳಿಯ ಮುಂದೆ ಒಂದು ಅವಕಾಶವನ್ನು ಕೋರಬಹುದಾಗಿದೆ. ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಗೂಂಡಾ ಕಾಯಿದೆ ಸೆಕ್ಷನ್ 3(3) ರ ಅನ್ವಯ 21 ದಿನಗಳಲ್ಲಿ ಆರೋಪಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆ ಒದಗಿಸಬೇಕು. ಆದರೆ, ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಅರ್ಜಿದಾರರ ಪತಿಯ ಬಂಧನಕ್ಕೆ ಹೊರಡಿಸಿರುವ ಆದೇಶ ನಿಯಮ ಬದ್ಧವಾಗಿಲ್ಲ, ಬಂಧಿತನಿಗೆ ದಾಖಲೆಯನ್ನು ಆತನಿಗೆ ತಿಳಿದಿರುವ ಭಾಷೆಯಲ್ಲಿ ಒದಗಿಸಿಲ್ಲ ಎಂದು ಹೇಳಿರುವ ನ್ಯಾಯಾಲಯ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ನ ಹಲವು ಆದೇಶಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ.