ಕರ್ನಾಟಕ

karnataka

ETV Bharat / state

ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ದುರಂತ: ಸ್ಫೋಟಕ್ಕೆ ಕಾರಣ ಪತ್ತೆ ಹಚ್ಚುತ್ತಿರುವ ತಜ್ಞರ ತಂಡ - ಬೆಂಗಳೂರು ನ್ಯೂಸ್​

ದೇವರಚಿಕ್ಕನಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ನಡೆದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ವಿಧಿವಿಜ್ಞಾನ ತಜ್ಞರು, ಅಗ್ನಿಶಾಮಕ ದಳ, ಬೆಸ್ಕಾಂ ಅಧಿಕಾರಿಗಳು ಅವಘಡಕ್ಕೆ ನಿಖರ ಕಾರಣಗಳೇನು ಎಂಬುದರ ಬಗ್ಗೆ ಪರಿಶೀಲನೆ ಮುಂದುವರೆಸಿದ್ದಾರೆ.

ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ದುರಂತ
fire explosion

By

Published : Sep 22, 2021, 12:11 PM IST

ಬೆಂಗಳೂರು: ದೇವರಚಿಕ್ಕನಹಳ್ಳಿ ಅಪಾರ್ಟ್​ಮೆಂಟ್​ನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಮೂಲ ಕಾರಣಗಳ ಕುರಿತು ಒಂದೆಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ವಿಧಿವಿಜ್ಞಾನ ತಜ್ಞರು ಹಾಗೂ ಅಗ್ನಿಶಾಮಕದಳ, ಬೆಸ್ಕಾಂ ಅಧಿಕಾರಿಗಳು ಅವಘಡಕ್ಕೆ ನಿಖರ ಕಾರಣಗಳೇನು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.

ಸಿಲಿಂಡರ್ ಸ್ಫೋಟದಿಂದ ದುರಂತ ಸಂಭವಿಸಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಸಿಲಿಂಡರ್ ಇರುವ ಹಾಗೆಯೇ ಇದೆ. ಹಾಗಾದರೆ ಶಾರ್ಟ್ ಸರ್ಕ್ಯೂಟ್​ನಿಂದ ದುರಂತ ಸಂಭವಿಸಿದೆಯಾ? ಅಥವಾ ಬೇರೆ ಏನಾದರೂ ಕಾರಣವಿದೆಯಾ? ಎಂಬುದರ ಬಗ್ಗೆ ತಜ್ಞರು ಹಾಗೂ ಅಧಿಕಾರಿಗಳು ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: ಅಗ್ನಿಯ ಕೆನ್ನಾಲಿಗೆಗೆ ತಾಯಿ-ಮಗಳು ಸಜೀವ ದಹನ

ಅಪಾರ್ಟ್​ಮೆಂಟ್​ನಲ್ಲಿ 73 ಫ್ಲ್ಯಾಟ್​ಗಳಿದ್ದು, ಒಟ್ಟು 54 ಕುಟುಂಬಗಳು ವಾಸವಾಗಿದ್ದವು. ದುರಂತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಈ ಪೈಕಿ ಕೆಲವರು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇನ್ನೂ ಕೆಲವರನ್ನು ಜಾಹ್ನವಿ ಎನ್ ಕ್ಲೈವ್ ಅಪಾರ್ಟ್​ಮೆಂಟ್​ಗೆ ಸ್ಥಳಾಂತರಿಸಲಾಗಿದೆ‌.

ಮೂರು - ನಾಲ್ಕು ಫ್ಲ್ಯಾಟ್​ಗಳಿಗೂ ಬೆಂಕಿ ವ್ಯಾಪಿಸಿದ್ದ ಪರಿಣಾಮ ಮನೆಯ ಗೋಡೆಗಳು ಬಿಸಿಯಾಗಿದೆ. ವೈರಿಂಗ್ ಸುಟ್ಟು ಹೋಗಿದ್ದು, ಸದ್ಯಕ್ಕೆ ವಾಸ ಮಾಡಲು ಯೋಗ್ಯವಲ್ಲ ಎಂದು ತಜ್ಞರು ಸೂಚಿಸಿದ್ದರಿಂದ ಎಲ್ಲರನ್ನು ಸ್ಥಳಾಂತರಿಸಲಾಗಿದೆ‌.

ಗ್ರೀಲ್​ಗಳ ತೆರವಿಗೆ ಅಸೋಸಿಯೇಷನ್ ನಿರ್ಧಾರ:

ಅವಘಡ ಹಿನ್ನೆಲೆಯಲ್ಲಿ ಅಪಾರ್ಟ್​ಮೆಂಟ್​ನ ಎಲ್ಲ ಫ್ಲ್ಯಾಟ್ ಗಳಲ್ಲಿ ಅಳವಡಿರುವ ಗ್ರೀಲ್ ತೆರವು ಮಾಡಲು ನಿರ್ಧರಿಸಲಾಗಿದೆ. ದುರಂತ ವೇಳೆ ಗ್ರೀಲ್‌ ಮಹಿಳೆ ಸಾವಿಗೆ ಮುಳುವಾಗಿತ್ತು. ಗ್ರೀಲ್ ಇಲ್ಲದಿದ್ದರೆ ಮೂರನೇ ಮಹಡಿಯಿಂದ ಮಹಿಳೆಯನ್ನು ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡುವ ಸಾಧ್ಯತೆಯಿತ್ತು.‌ ಈ ನಿಟ್ಟಿನಲ್ಲಿ ಎಲ್ಲ ಫ್ಲ್ಯಾಟ್​ಗಳ ಬಾಲ್ಕನಿಯಲ್ಲಿ ಅಳವಡಿಸಿರುವ ಗ್ರೀಲ್​ಗಳನ್ನು ತೆರವು ಮಾಡಲು ಅಸೋಸಿಯೇಷನ್ ತೀರ್ಮಾನಿಸಿದೆ‌.

ಬೆಂಕಿ ಕಾಣಿಸಿಕೊಂಡಿದ್ದು ಮೊದಲು ಹಾಲ್​ನಲ್ಲಿ:

ಫ್ಲ್ಯಾಟ್​ನ ಹಾಲ್​ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಹಾಲ್​ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವುಡ್ ಹಾಗೂ ಪ್ಲೇವುಡ್ ಒಳಾಂಗಣ ವಿನ್ಯಾಸ ಮಾಡಲಾಗಿತ್ತು. ಹಾಲ್​ನಲ್ಲಿ ನಿಗೂಢವಾಗಿ ಕಾಣಿಸಿಕೊಂಡ ಬೆಂಕಿ ಕಿಡಿ, ಪ್ಲೇವುಡ್ ಹಾಗೂ ಸೋಫಾಗೆ ತಗುಲಿ ಬೆಂಕಿ ವ್ಯಾಪಿಸಿದೆ ಎಂದು ಹೇಳಲಾಗುತ್ತಿದೆ.

ಅಪಾರ್ಟ್​ಮೆಂಟ್​ಗಳಲ್ಲಿ‌ ಅಗ್ನಿ ಸುರಕ್ಷತೆ ಬಗ್ಗೆ ಪಾಲಿಸಬೇಕಾದ‌‌ ಕ್ರಮಗಳೇನು ?

ಅಪಾರ್ಟ್​ಮೆಂಟ್​ಗಳಲ್ಲಿ ಅಗ್ನಿ‌‌ ಅವಘಡ ಸಂಭವಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೋಡುವುದಾದರೆ ಬಹು ಅಂತಸ್ತಿ‌ನ ಅಪಾರ್ಟ್​ಮೆಂಟ್ ನಿರ್ಮಾಣ ಮಾಡುವಾಗ ಸುತ್ತಮುತ್ತಲು ವಾಹನ ಹೋಗುವಷ್ಟು ಜಾಗವನ್ನು ಬಿಟ್ಟಿರಬೇಕು. ಪ್ರತಿಯೊಂದು ಮಹಡಿಯಲ್ಲಿಯೂ ಅಗ್ನಿನಂದ‌ಕ‌‌ ಇಟ್ಟಿರಬೇಕು.‌‌ ನಿರ್ವಹಣಾ ತಂಡವು ಆಗಾಗ ಈ ಬಗ್ಗೆ ನಿಗಾ ವಹಿಸಬೇಕು. ಈ ಕುರಿತು ಅಪಾರ್ಟ್​ಮೆಂಟ್ ನಿವಾಸಿಗಳಿಗೆ, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಕೊಡಬೇಕು.‌ ಆದರೆ, ಯಾವ ನಿಯಮಗಳನ್ನು ಪಾಲಿಸದೇ ಇರುವುದರಿಂದ ದುರಂತ ಸಂಭವಿಸಿದೆ.

ABOUT THE AUTHOR

...view details