ಕರ್ನಾಟಕ

karnataka

ETV Bharat / state

ರಾಜ್ಯ ಬಜೆಟ್​: ಇಂಧನ ಕ್ಷೇತ್ರಕ್ಕೆ ಸಿಗುತ್ತಾ ಉತ್ತೇಜನ?

ಪ್ರಸಕ್ತ ಬಜೆಟ್​ನಲ್ಲಿ ಇಂಧನ ಇಲಾಖೆ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದು, ಹಿಂದಿನ ಯೋಜನೆಗಳಿಗೆ ಹಣ ಬಿಡುಗಡೆಯ ಜೊತೆಗೆ ಹೊಸದಾಗಿ ಒಂದಷ್ಟು ಯೋಜನೆ ಘೋಷಿತವಾಗುವ ಸಾಧ್ಯತೆ ಇದೆ.

expect-15-thousand-subsidies-for-the-energy-sector
ರಾಜ್ಯ ಬಜೆಟ್​ನಲ್ಲಿ ಇಂದನಕ್ಕೆ ಭಾರಿ ನಿರೀಕ್ಷೆ

By

Published : Mar 5, 2020, 4:30 AM IST

ಬೆಂಗಳೂರು: ಪ್ರಸಕ್ತ ಬಜೆಟ್​ನಲ್ಲಿ ಇಂಧನ ಇಲಾಖೆ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದು, ಹಿಂದಿನ ಯೋಜನೆಗಳಿಗೆ ಹಣ ಬಿಡುಗಡೆಯ ಜೊತೆಗೆ ಹೊಸದಾಗಿ ಒಂದಿಷ್ಟು ಯೋಜನೆ ಘೋಷಿತವಾಗುವ ಸಾಧ್ಯತೆ ಇದೆ. ಇಲಾಖೆ ಈಗಲೂ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕೈಲಿರುವ ಹಿನ್ನೆಲೆ ನಿರೀಕ್ಷೆ ಹೆಚ್ಚಿಸಿದೆ. ಹಣಕಾಸು ಸಚಿವರೂ ಅವರೇ ಆಗಿರುವ ಹಿನ್ನೆಲೆ ಉತ್ತಮ ಪ್ರೋತ್ಸಾಹ ನಿರೀಕ್ಷಿಸುವುದು ಸಹಜ. ಅಲ್ಲದೇ, ಇದೇ ವರ್ಷ ಬಿಎಸ್-6 ಗುಣಮಟ್ಟದ ಇಂಧನ ಬರುವ ಏಪ್ರಿಲ್ ಮೊದಲ ವಾರದಿಂದ ಲಭ್ಯವಾಗಲಿದೆ.

ರಾಜ್ಯ ಬಜೆಟ್​ನಲ್ಲಿ ಇಂಧನಕ್ಕೆ ಭಾರಿ ನಿರೀಕ್ಷೆ

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದಕ್ಕೆ ಉತ್ತೇಜನ ಕೊಟ್ಟು, ಹೆಚ್ಚು ಪ್ರೋತ್ಸಾಹಿಸಿದ್ದು, ರಾಜ್ಯದಲ್ಲಿ ಕೂಡ ಇಂಧನದ ಹೊಸ ಆವಿಷ್ಕಾರ ಹಾಗೂ ನವೀಕರಿಸಬಹುದಾದ ಇಂಧನಕ್ಕೆ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಇದರಿಂದ ಹಿಂದೆಂದಿಗಿಂತ ಈ ಸಾರಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. 15 ಸಾವಿರ ಕೋಟಿ ಮೊತ್ತವನ್ನು ಸುಲಭವಾಗಿ ದಾಟಲಿದೆ ಎಂಬ ಮಾತು ಕೇಳಿಬರುತ್ತಿದೆ.

ಹಿಂದಿನ ಸರ್ಕಾರಗಳು ನವೀಕರಿಸಬಹುದಾದ ಇಂಧನ, ಸೋಲಾರ್, ಗಾಳಿ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಾ ಬಂದಿವೆ. ಅದೇ ಸಂಪ್ರದಾಯವನ್ನು ಬಿಎಸ್​ವೈ ಸರ್ಕಾರವೂ ಮುಂದುವರಿಸುವ ನಿರೀಕ್ಷೆ ಇದೆ. ಸೌರ, ಗಾಳಿ ವಿದ್ಯುತ್ ಉತ್ಪಾದಿಸಲು ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ವಿಶೇಷ ಪ್ರೋತ್ಸಾಹ, ಸೋಲಾರ್ ವಿದ್ಯುತ್ ಉತ್ಪಾದನೆ ಬಳಸಿ, ಗೃಹ ಬಳಕೆದಾರರಿಗೆ ಉತ್ತೇಜನ, ಯುವ ಉದ್ಯಮಿಗಳ ಪೋಷಣೆ, ವಿಶೇಷ ಸಬ್ಸಿಡಿ, ವಿನಾಯಿತಿ, ರಿಯಾಯಿತಿ ಅವಕಾಶಗಳ ಘೋಷಣೆ ಆಗುವ ನಿರೀಕ್ಷೆ ಹೊಂದಲಾಗಿದೆ.

ಕಳೆದ ಐದಾರು ವರ್ಷದ ಈಚೆಗೆ, ಇಂಧನ ಕ್ಷೇತ್ರ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಉತ್ತೇಜನ ಸಿಕ್ಕಿದೆ. 2008ರಿಂದ 2013ರವರೆಗೆ 5361 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಮಾತ್ರ ಹೆಚ್ಚಿಸಲಾಗಿತ್ತು. ಇದನ್ನು ಸಿದ್ದರಾಮಯ್ಯ ಸಿಎಂ ಆದ ಅವಧಿಯಲ್ಲಿ 9,349 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳಗೊಂಡಿತ್ತು. ನವೀಕರಿಸಬಹುದಾದ ಇಂಧನ ಮೂಲಗಳಿಂದ 5,092 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಒಳಗೊಳ್ಳಲಾಗಿತ್ತು. ಈ ವ್ಯವಸ್ಥೆ ಮುಂದಿನ ದಿನಗಳಲ್ಲಿ ಹೆಚ್ಚು ಪ್ರೋತ್ಸಾಹ ಪಡೆಯುತ್ತಾ ಸಾಗಿದೆ.

139 ಹೊಸ ಮತ್ತು 309 ಉನ್ನತೀಕರಿಸಿದ ಉಪಕೇಂದ್ರಗಳ ಸ್ಥಾಪನೆ ಮತ್ತು 3826 ಸರ್ಕ್ಯೂಟ್ ಕಿ.ಮೀ.ಗಳ ಪ್ರಸರಣ ಮಾರ್ಗ ರಚನೆಯಿಂದ ಪ್ರಸರಣ ಜಾಲದ ಸಾಮರ್ಥ್ಯ ಹೆಚ್ಚಿಸಲು ಸಹಕರಿಸಿದ್ದರು. ಅಡಚಣೆ ರಹಿತ ವಿದ್ಯುತ್ ಸರಬರಾಜಿಗಾಗಿ 300ಕ್ಕೂ ಹೆಚ್ಚು ಟ್ರಾನ್ಸ್​ಫಾರ್ಮರ್, 150ಕ್ಕೂ ಹೆಚ್ಚು ಟ್ರಾನ್ಸ್​ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯಕ್ಕೆ ಅನುದಾನ ಮೀಸಲಿಡುವ ಸಾಧ್ಯತೆ ಇದೆ.

ಸೌರಶಕ್ತಿ ನೀತಿ 2014-2021 ಅಡಿ 2304 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಗೊಳಿಸಲಾಗಿದ್ದು, ಈ ಸಾರಿ ಇದಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪಾವಗಡ ತಾಲೂಕಿನ 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕೇಂದ್ರವನ್ನು ಇನ್ನಷ್ಟು ಉನ್ನತೀಕರಣಗೊಳಿಸುವ ಸಾಧ್ಯತೆ ಇದೆ. ರಾಜ್ಯದ ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದ ನೀರಾವರಿ ಪಂಪ್​ಸೆಟ್, ಭಾಗ್ಯ ಜ್ಯೋತಿ, ಕುಟೀರಜ್ಯೋತಿ ಗ್ರಾಹಕರ ಸಹಾಯಧನವನ್ನು 2018-19ನೇ ಸಾಲಿನ 9,250 ಕೋಟಿ ರೂ.ಗಳಿಂದ 2019-20ನೇ ಸಾಲಿನಲ್ಲಿ 11,250 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದು ಈ ಸಾರಿ ಇನ್ನಷ್ಟು ಪ್ರಗತಿ ಹೊಂದಲಿದೆ.

ಕರ್ನಾಟಕ ರಾಜ್ಯವು ನವೀಕರಿಸಬಹುದಾದ ಇಂಧನದ ಉತ್ಪಾದನೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ ಪ್ರಸ್ತುತ ಅಳವಡಿಸಿದ ಸಾಮರ್ಥ್ಯವು 12,747 ಮೆಗಾ ವ್ಯಾಟ್​ ಆಗಿರುತ್ತದೆ. ಸೌರ ಶಕ್ತಿ ಉತ್ಪಾದನೆಯಲ್ಲಿಯೂ ಸಹ ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 2100 ಮೆ.ವ್ಯಾ. ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನೆಯನ್ನು ಅಳವಡಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನಲ್ಲಿ ಇನ್ನಷ್ಟು ಅನುದಾನ ಇದಕ್ಕಾಗಿ ಮೀಸಲಿಡುವ ನಿರೀಕ್ಷೆ ಹೊಂದಲಾಗಿದೆ.

ಒಟ್ಟಾರೆ ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಬಜೆಟ್​ನಲ್ಲಿ ಇಂಧನ ಇಲಾಖೆ ಕೂಡ ಸಹಜವಾಗಿಯೇ ಪ್ರಧಾನ ಪಾತ್ರ ವಹಿಸಲಿದ್ದು, ದೊಡ್ಡ ಮೊತ್ತವನ್ನು ತನ್ನ ಅನುದಾನವಾಗಿ ಪಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ.

ABOUT THE AUTHOR

...view details