ಬೆಂಗಳೂರು: ಅನುಕಂಪದ ಅಲೆಯ ಜತೆ ಪ್ರಬಲ ತಂತ್ರಗಾರಿಕೆಯನ್ನು ರೂಪಿಸುವ ಮೂಲಕ ಜಮಖಂಡಿ ಮಾದರಿಯಲ್ಲಿ ಕುಂದಗೋಳ ಉಪ ಚುನಾವಣೆ ಗೆಲುವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಗೇಮ್ ಪ್ಲ್ಯಾನ್ ರೂಪಿಸಿದ್ದಾರೆ.
ಹಿಂದೆ ಸಿದ್ದು ನ್ಯಾಮಗೌಡ ನಿಧನದಿಂದ ತೆರವಾಗಿದ್ದ ಜಮಖಂಡಿ ಕ್ಷೇತ್ರದಿಂದ ಅವರ ಪುತ್ರ ಆನಂದ್ ನ್ಯಾಮಗೌಡ ಅವರನ್ನು ಕಣಕ್ಕಿಳಿಸಿ ವಿಶಿಷ್ಟ ತಂತ್ರಗಾರಿಕೆ ರೂಪಿಸಿ ಅನುಕಂಪದ ಜತೆ ಪ್ರಬಲ ತಂತ್ರಗಾರಿಕೆ ಹೆಣೆದು ಗೆಲ್ಲಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದರು. ಸಿದ್ದು ನ್ಯಾಮಗೌಡ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ವಿರುದ್ಧ ಕೇವಲ 2795 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅವರ ಪುತ್ರನನ್ನು ಕಣಕ್ಕಿಳಿಸಿ ಅನುಕಂಪದ ಜತೆ ಉತ್ತಮ ತಂತ್ರಗಾರಿಕೆ ಮೂಲಕ ಸಿದ್ದರಾಮಯ್ಯ 39,476 ಮತಗಳ ಭಾರಿ ಅಂತರದ ಗೆಲುವು ಸಾಧಿಸಲು ಕಾರಣರಾಗಿದ್ದರು.
ಏನಿದು ತಂತ್ರಗಾರಿಕೆ
ಜಮಖಂಡಿಯಲ್ಲಿ ಗೆಲುವಿಗೆ ಬಳಸಿದ್ದ ತಂತ್ರಗಾರಿಕೆಯನ್ನು ಕುಂದಗೋಳದಲ್ಲಿಯೂ ಬಳಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಇದರ ಹಿನ್ನೆಲೆ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಶಾಸಕರಿಗೆ ಹಾಗೂ ಪ್ರತಿ ಜಿಲ್ಲಾ ಪಂಚಾಯಿತಿಗೆ ಒಬ್ಬ ಸಚಿವರನ್ನು ಉಸ್ತುವಾರಿಯಾಗಿ ನೇಮಿಸುತ್ತಿದ್ದಾರೆ. ಕುಂದಗೋಳದಲ್ಲಿ ಈ ಮೂಲಕ ಏಕಕಾಲಕ್ಕೆ ಸಾವಿರಾರು ಕಾರ್ಯಕರ್ತರಿಗೆ 40 ಮಂದಿ ಶಾಸಕರು ಹಾಗೂ 6 ಸಚಿವರು ನೇತೃತ್ವ ವಹಿಸಿ ಮಾರ್ಗದರ್ಶನ ನೀಡುವ ಕಾರ್ಯ ಮಾಡಲಿದ್ದಾರೆ. ಈ ಮೂಲಕ ಸಿ.ಎಸ್. ಶಿವಳ್ಳಿ ಪತ್ನಿ ಕುಸುಮಾವತಿ ಗೆಲುವು ಸುಗಮವಾಗಿಸುವ ಯತ್ನ ಮಾಡಲಿದ್ದಾರೆ.