ಬೆಂಗಳೂರು :ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಆದರೆ, ಜನರು ಮಾತ್ರ ನನ್ನ ಕೈಹಿಡಿಯುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಸಾಲಮನ್ನಾ ಮಾಡಿದೆ. ಹಲವಾರು ಯೋಜನೆಗಳನ್ನ ಕೊಟ್ಟೆ. ಕೆರೆಯನ್ನ ನುಂಗಿ ಅಧಿಕಾರಿಗಳು, ರಾಜಕಾರಣಿಗಳು ಹೈಫೈ ಕಾಲೋನಿ ಮಾಡಿಕೊಂಡರು. ಆದರೆ, ಅಲ್ಲಿ ಮಳೆಗಾಲ ಬಂದರೆ ನೀರು ತುಂಬಿಕೊಳ್ತಿತ್ತು.
ನನ್ನ ಅವಧಿಯಲ್ಲಿ ಅದನ್ನ ಸರಿಪಡಿಸಿದ ಕಾರಣ ಹೆಲಿಕಾಪ್ಟರ್ನಲ್ಲಿ ಹೂಮಳೆಗರೆದರು. ವಿಪರ್ಯಾಸ ಅಂದ್ರೆ ಚುನಾವಣೆಯಲ್ಲಿ ಜನರು ಮಾತ್ರ ನಮ್ಮ ಪಕ್ಷಕ್ಕೆ ಮತ ಹಾಕಲೇ ಇಲ್ಲ. ಏನೂ ಕೆಲಸ ಮಾಡದವರಿಗೆ ಮಾತ್ರ ವೋಟು ಹಾಕಿ ಗೆಲ್ಲಿಸುತ್ತಾರೆ. ಇದು ಇಂದಿನ ಪರಿಸ್ಥಿತಿ ಎಂದು ನೋವು ತೋಡಿಕೊಂಡರು.
ಬೆಂಗಳೂರಿನ ದಾಸರಹಳ್ಳಿಯಲ್ಲಿ ಜೆಡಿಎಸ್ ಸಮಾವೇಶ ಬಿಜೆಪಿ, ಕಾಂಗ್ರೆಸ್ನಿಂದ ಅಭಿವೃದ್ಧಿ ಹೆಸರಲ್ಲಿ ಲೂಟಿಯಾಗುತ್ತಿದೆ. ಪಾಪದ ಹಣದಿಂದ ಬಿಜೆಪಿ ಮತ್ತು ಕಾಂಗ್ರೆಸ್ನವರು ಮತದಾರರನ್ನು ಕೊಂಡ್ಕೊಳ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ಗೆ ಅಭಿವೃದ್ಧಿಯ ದೂರದೃಷ್ಟಿ ಇಲ್ಲ ಎಂದು ಕಿಡಿಕಾರಿದರು.
ಸಮ್ಮಿಶ್ರ ಸರ್ಕಾರಗಳಲ್ಲಿ ನಾನು ಪಟ್ಟ ಹಿಂಸೆ ನನಗೆ ಗೊತ್ತು. ಎರಡೂ ಸಮ್ಮಿಶ್ರ ಸಂದರ್ಭಗಳಲ್ಲೂ ಅಭಿವೃದ್ಧಿಗೆ ಅವಕಾಶ ಸಿಗ್ಲಿಲ್ಲ. ಚುನಾವಣೆಗೂ ಮುನ್ನ 15 ಲಕ್ಷ ಮನೆ ಕಟ್ಟಿಸಿಕೊಡುವ ಭರವಸೆ ಕೊಟ್ಟಿತ್ತು ಕಾಂಗ್ರೆಸ್. ಆದ್ರೆ, ಸಮ್ಮಿಶ್ರ ಸರ್ಕಾರ ಆದಾಗ ಜನರಿಗೆ ಮನೆ ಕಟ್ಟಲು ಹಣ ಕೊಡಕ್ಕಾಗ್ಲಿಲ್ಲ.
ನಾನು ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲದಿಂದ ಸಿಎಂ ಆಗಿದ್ದೆ. ಆ ಅವಧಿಯಲ್ಲಿ ಪಟ್ಟ ಕಷ್ಟ ನನಗೆ ಗೊತ್ತು. ನಾನು ರೈತರ ಸಾಲ ಮನ್ನಾ ಮಾಡಿದೆ. ಅದರಲ್ಲೇನು ನನಗೆ ಕಮೀಷನ್ ಬರೋದಿಲ್ಲ. ನಾನು ಬಂದಿದ್ದು ಜನರ ದುಡ್ಡು ಲೂಟಿ ಹೊಡೆಯಲು ಅಲ್ಲ ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ಶೇ. 10ರಷ್ಟು ಕಮೀಷನ್ ಸರ್ಕಾರ ಎನ್ನುತ್ತಾರೆ. ನನ್ನ ಸರ್ಕಾರಕ್ಕೆ ಯಾವನಾದರೂ ಹಾಗೆ ಹೇಳಿದ್ದಾನಾ?. ಕೋವಿಡ್ ಕಾರಣ ಶಾಲೆಗಳು ನಡೆಯುತ್ತಿಲ್ಲ. ಆದರೂ ಖಾಸಗಿ ಶಾಲೆಗಳಿಂದ ಶುಲ್ಕ ವಸೂಲಿ ನಿಂತಿದೆಯಾ? ಎಂದು ಪ್ರಶ್ನಿಸಿದರು.