ಬೆಂಗಳೂರು:ನಾಯಿಯಿಂದ ಹರಡುವ ರೇಬಿಸ್ ಕಾಯಿಲೆ ನಿರ್ಮೂಲನೆಗೆ ರಚಿಸಿರುವ ಜಂಟಿ ಚಾಲನಾ ಸಮಿತಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಹಾಗೂ ತಜ್ಞರ ಸಲಹೆ ಆಧರಿಸಿ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಶಾಲಿನಿ ರಜನೀಶ್ ಸೂಚನೆ ನೀಡಿದರು.
ವಿಕಾಸಸೌಧದಲ್ಲಿ ಇಂದು ರೇಬಿಸ್ ನಿರ್ಮೂಲನೆಗಾಗಿ ರಚಿಸಿರುವ ಜಂಟಿ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರೇಬಿಸ್ ನಿರ್ಮೂಲನೆಗಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರಚಿಸುವ ಸಮಿತಿಗಳಲ್ಲಿನ ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕು.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಅರಣ್ಯ ಇಲಾಖೆಗಳು, ವನ್ಯಜೀವಿ ಸಂರಕ್ಷಣಾ ಮಂಡಳಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಮನ್ವಯದೊಂದಿಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು.
ಕೃಷಿ,ತೋಟಗಾರಿಕೆ, ಪಶುಸಂಗೋಪನೆ,ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಗಳ ತಜ್ಞರು ಕೂಡ ಈ ಕ್ರಿಯಾಯೋಜನೆಯ ಭಾಗವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಮಹಾನಗರದಲ್ಲಿರುವ ಬೀದಿನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ( Anti Rabies Vaccine) ಆಂದೋಲನ ಕೈಗೊಳ್ಳಲು ಬಿಬಿಎಂಪಿಯ ಪಶುಸಂಗೋಪನೆ ವಿಭಾಗಕ್ಕೆ ತ್ವರಿತವಾಗಿ 2 ಕೋಟಿ ರೂ ಬಿಡುಗಡೆ ಮಾಡಲು ಈ ಸಂದರ್ಭದಲ್ಲಿ ಸೂಚಿಸಿದ ಅವರು, ಸಮೀಕ್ಷಾ ಕಾರ್ಯ ಮತ್ತು ಪ್ರಕರಣಗಳ ಸರಿಯಾದ ವರದಿಯಾಗಲು ರಾಷ್ಟ್ರೀಯ ಮಾರ್ಗಸೂಚಿಗಳ ಪ್ರಕಾರ ವಿವಿಧ ಹಂತಗಳ ವೈದ್ಯಕೀಯ ,ಆರೋಗ್ಯ ಸಿಬ್ಬಂದಿಗೆ ತರಬೇತಿ ಆಯೋಜಿಸಬೇಕು ಎಂದು ತಿಳಿಸಿದರು.