ಬೆಂಗಳೂರು:ಮಾಧ್ಯಮ ಪ್ರತಿನಿಧಿಗಳು, ಏಜೆಂಟರು ಹಾಗೂ ಪತ್ರಿಕಾ ವಿತರಕರು ಕೋವಿಡ್-19ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಘೋಸಿಸಲು ಸರ್ಕಾರ ಹಾಗೂ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ.
ಮಾಧ್ಯಮ ಪ್ರತಿನಿಧಿಗಳ ಹಿತರಕ್ಷಣೆಗಾಗಿ ಕೋರಮಂಗಲ ನಿವಾಸಿ ಜಾಕೊಬ್ ಜಾರ್ಜ್ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ಈ ಕುರಿತು ವಿವರಣೆ ಕೇಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಹೆಚ್.ಸುನೀಲ್ ಕುಮಾರ್ ವಾದ ಮಂಡಿಸಿ, ಕೊರೊನಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಟಿವಿ, ಪತ್ರಿಕೆ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳ ಪ್ರತಿನಿನಿಧಿಗಳು ಕೋವಿಡ್-19 ಸೋಂಕಿತ ಪ್ರದೇಶಗಳು, ಆಸ್ಪತ್ರೆಗಳು ಹಾಗೂ ಸೋಂಕಿತರ ಕುಟುಂಬಗಳ ಸದಸ್ಯರ ಬಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದರಿಂದ ಅವರಿಗೂ ಸೋಂಕು ತಗುಲುವ ಸಾಧ್ಯತೆ ಇದೆ. ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಇವರು ಕೂಡಾ ಕೊರೊನಾ ವಾರಿಯರ್ಸ್ ಆಗಿದ್ದಾರೆ. ಹೀಗಾಗಿ ಮಾಧ್ಯಮ ಪ್ರತಿನಿಧಿಗಳು, ಏಜೆಂಟರು ಹಾಗೂ ಪತ್ರಿಕಾ ವಿತರಕರಲ್ಲಿ ಯಾರಾದರೂ ಮೃತಪಟ್ಟರೆ ಸರ್ಕಾರದಿಂದ 50 ಲಕ್ಷ ರೂ. ಹಾಗೂ ಆಯಾ ಮಾಧ್ಯಮ ಸಂಸ್ಥೆಗಳಿಂದ 50 ಲಕ್ಷ ರೂ. ಪರಿಹಾರ ಘೋಷಿಸಲು ನಿರ್ದೇಶಿಸಬೇಕು ಎಂದು ವಕೀಲ ಸುನಿಲ್ ಕುಮಾರ್ ಮನವಿ ಮಾಡಿದರು.