ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ನಿನ್ನೆ ರಾತ್ರಿ ರಸ್ತೆ ಅಪಘಾತದಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಪ್ರಕರಣ ಸಂಬಂಧ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಪ್ರತಿಕ್ರಿಯಿಸಿದ್ದು, ವೇಗದ ಚಾಲನೆ ಹಾಗೂ ನಿರ್ಲಕ್ಷ್ಯತನವೇ ಅಪಘಾತಕ್ಕೆ ಕಾರಣವಾಗಿದೆ ಎಂದು ತನಿಖೆ ವೇಳೆ ಕಂಡು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಸುಮಾರು 9.16 ಗಂಟೆ ವೇಳೆ ಸಿಲ್ಕ್ ಬೋರ್ಡ್ ಕಡೆಯಿಂದ ಹೊಸೂರು ಮಾರ್ಗದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ಬೈಕ್‌ಗೆ ಬೊಲೊನಾ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಫ್ಲೈ ಓವರ್ ಮೇಲಿನ ತಡೆಗೋಡೆಯಿಂದ ಕೆಳಗೆಬಿದ್ದು ಜೆ.ಪಿ.ನಗರದ ನಿವಾಸಿ ಪ್ರೀತಮ್ ಕುಮಾರ್ ( 30) ಹಾಗೂ ಚೆನ್ನೈ ಮೂಲದ ಕೃತಿಕಾ ರಾಮನ್ (28) ಸಾವನ್ನಪ್ಪಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಅಪಘಾತ ಬೈಕ್‌ಗೆ ಗುದ್ದಿದ ಕಾರು ಚಾಲಕನ ಸ್ಥಿತಿ ಗಂಭೀರ
ಘಟನೆಗೆ ಕಾರಣರಾದ ನಿತೇಶ್ (23) ಬೊಮ್ಮಸಂದ್ರ ತಿರುಪಾಳ್ಯ ಗ್ರಾಮದ ನಿವಾಸಿಯಾಗಿದ್ದು, ಬಿಎಂಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ದುರ್ಘಟನೆಯಲ್ಲಿ ನಿತೇಶ್ಗೆ ಶ್ವಾಸಕೋಶದಲ್ಲಿ ಗಂಭೀರ ಗಾಯವಾಗಿದ್ದು, ಸೆಂಟ್ ಜಾನ್ಸ್ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಆತ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಸಂಚಾರಿ ಆಯುಕ್ತರು ತಿಳಿಸಿದ್ದಾರೆ.
ಮೃತ ಪ್ರೀತಂ ಖಾಸಗಿ ಕಂಪನಿ ಕಂಟ್ರೋಲ್ ಮ್ಯಾನೇಜರ್
ಮೃತ ಪ್ರೀತಂ ಸರ್ಜಾಪುರ ರಸ್ತೆಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕಂಟ್ರೋಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಕೃತಿಕಾ ಮಹದೇವಪುರದ ಖಾಸಗಿ ಕಂಪನಿಯೊಂದರಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದಳು. ಇಬ್ಬರು ಸ್ನೇಹಿತರಾಗಿದ್ದರು. ನಿನ್ನೆ ರಾತ್ರಿ ಕೆಲಸ ನಿಮಿತ್ತ ಹೊಸೂರಿಗೆ ಬೈಕ್ ನಲ್ಲಿ ಹೋಗುತ್ತಿದ್ದರು. ಮೇಲ್ಸೇತುವೆ ಬಳಿ ಬೈಕ್ ಸಮಸ್ಯೆಯಾಗಿದ್ದು, ಸುಮಾರು 50 ಮೀಟರ್ ದೂರದವರೆಗೂ ಬೈಕ್ ತಳ್ಳಿಕೊಂಡೇ ಮೇಲುಸೇತುವೆಯ ಎಡಭಾಗದಲ್ಲಿರುವ, ತಂಗುದಾಣದಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದರು.
ಪಾರ್ಕ್ ಮಾಡಿ ಕೆಲವೇ ಕ್ಷಣಗಳಲ್ಲಿ ಕಾರು ಬಂದು ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಫ್ಲೈಓವರ್ ತಡೆಗೋಡೆ ದಾಟಿ ಇಬ್ಬರೂ ಕೆಳಕ್ಕೆ ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಗೆ ಕಾರು ಚಾಲಕನ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಾಣುತ್ತಿದೆ. ಚಾಲಕ ಮದ್ಯಪಾನ ಮಾಡಿದ್ದನಾ, ಅಥವಾ ಡ್ರಗ್ಸ್ ಸೇವಿಸಿದ್ದನಾ ಎಂಬ ಬಗ್ಗೆ ಪತ್ತೆ ಹಚ್ಚುವ ದೃಷ್ಟಿಯಿಂದ ಚಾಲಕನ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಅತಿವೇಗವೇ ಅಪಘಾತಕ್ಕೆ ಕಾರಣ
ನಗರದಲ್ಲಿ ಅತಿವೇಗ, ನಿರ್ಲಕ್ಷ್ಯತನದ ಚಾಲನೆಯಿಂದ ಅವಘಡಗಳಾಗುತ್ತಿವೆ. ಎಲಿವೇಟೆಡ್ ಫ್ಲೈ ಓವರ್ ಮೇಲೆ ವೇಗ ಮಿತಿ 50-80 ಕಿ.ಮೀ ಇದೆ. ಆದರೆ ವಾಹನ ದಟ್ಟಣೆಯಿದ್ದಾಗ 40 ಕಿ.ಮೀಗೆ ತಗ್ಗಬೇಕು. ನಿನ್ನೆ ನಡೆದ ಘಟನೆಯಲ್ಲಿ ಕಾರು ಚಾಲಕ 100 ಕಿ.ಮೀ ಗೂ ಅಧಿಕ ವೇಗವಾಗಿ ಕಾರು ಚಲಾಯಿಸುತ್ತಿದ್ದ. ಪ್ರತಿ ಅಪಘಾತವಾದಾಗ ಸುಪ್ರೀಂಕೋರ್ಟ್ ಆದೇಶದಂತೆ ಒಂದು ತಂಡ ರಚನೆಯಾಗಿದ್ದು, ತಂಡದಲ್ಲಿ ಟ್ರಾಫಿಕ್ ಪೊಲೀಸರು, ರಸ್ತೆ ಪ್ರಾಧಿಕಾರದ ಅಧಿಕಾರಿಗಳು, ಲೊಕೋಪಯೋಗಿ ಇಲಾಖೆಯ ಇಂಜಿನಿಯರ್ಗಳು ಇರಲಿದ್ದಾರೆ. ಸ್ಥಳ ಪರಿಶೀಲಿಸಿದ ಬಳಿಕ ಯಾರದ್ದೇ ದೋಷವಿದ್ದರೂ ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ ಎಂದರು.
ಇದನ್ನೂ ಓದಿ : ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿನ ಅಪಘಾತದಲ್ಲಿ ಯುವಕ-ಯುವತಿ ಸಾವು: ಭಯಾನಕ ದೃಶ್ಯ CCTVಯಲ್ಲಿ ಸೆರೆ
ಘಟನೆ ನಡೆದ ಸ್ಥಳದಲ್ಲಿ ಅಪಘಾತಕ್ಕೂ ಮುನ್ನ ವೇಗವಾಗಿ ಚಾಲನೆ ಮಾಡುತ್ತಿದ್ದ ವಾಹನ ಸವಾರರ ವಿರುದ್ಧ 15 ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಹೀಗಿದ್ದರೂ ಭೀಕರ ಅಪಫಾತ ಸಂಭವಿಸಿದೆ. ಅಪಘಾತ ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ತೀವ್ರಗತಿಯಲ್ಲಿ ಅನುಷ್ಠಾನಕ್ಕೆ ಮುಂದಾದರೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಾರೆ. ಸಾರ್ವಜನಿಕರು ತಾವು ಪ್ರಜ್ಞಾವಂತರಾಗಿದ್ದೇವೆ ಎಂದು ನಮ್ಮನ್ನೇ ದೂರುತ್ತಾರೆ ಎಂದರು.
ಉದಾಹರಣೆಗೆ ಹೇಳುವುದಾದರೆ ನಾವು ಕಾಂಟ್ಯಾಕ್ಟ್ ಲೆಸ್ ಫೈನ್ ಸಹ ವಿಧಿಸಿ ನೋಡಿದ್ದೇವೆ. ಕೇವಲ ಫೋಟೋಗ್ರಾಫ್ ತೆಗೆದುಕೊಂಡು ಅದನ್ನೇ ಆಧರಿಸಿ ದಂಡ ವಿಧಿಸಿದ್ದೆವು. ಆದರೆ, ಕಾಂಟ್ಯಾಕ್ಟ್ ಲೆಸ್ ಕೆಲಸ ಮಾಡಿದ ದಿನಗಳೇ ಅಧಿಕ ದಂಡ ವಿಧಿಸಲ್ಪಟ್ಟಿದೆ. ಅಂದರೆ ಜನ ತಾವೂ ಸಹ ಯೋಚಿಸಬೇಕು, ನಿರ್ಲಕ್ಷ್ಯವಹಿಸಬಾರದು. ಬೆಂಗಳೂರಿನಲ್ಲಿ 52 ಬ್ಲ್ಯಾಕ್ ಸ್ಪಾಟ್ ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಪೊಲೀಸರ ನಿಯೋಜನೆ ಹೆಚ್ಚಿಸಲಾಗಿದೆ. ರಸ್ತೆಯಲ್ಲಿರುವ ದೋಷಗಳ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಮಾಹಿತಿ ನೀಡಿದರು.