ಕರ್ನಾಟಕ

karnataka

By

Published : Sep 30, 2020, 9:26 PM IST

ETV Bharat / state

ಆರ್.ಆರ್. ನಗರ ಬೈ ಎಲೆಕ್ಷನ್: ರಾಜಕೀಯ ಮುಖಂಡರ ಜತೆ ಚುನಾವಣಾಧಿಕಾರಿ ಸಭೆ

ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರ ಬೈ ಎಲೆಕ್ಷನ್​ ದಿನಾಂಕ ಘೋಷಣೆ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಚುನಾವಣೆಯ ರೂಪುರೇಷೆಗಳ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಭೆ ನಡೆಸಿದ್ರು.

Election officer meeting with political leaders
ಚುನಾವಣಾಧಿಕಾರಿ ಸಭೆ

ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ ಚುನಾವಣೆಗೆ ಸಂಬಂಧಿಸಿದಂತೆ ಇಂದು ರಾಜಕೀಯ ಪಕ್ಷಗಳ ಮುಖಂಡರ ಜೊತೆ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಸಭೆ ನಡೆಸಿದರು.

ಚುನಾವಣಾಧಿಕಾರಿ ಸಭೆ

ಕೇಂದ್ರ ಚುನಾವಣಾ ಆಯೋಗ ನಿನ್ನೆ ಉಪ ಚುನಾವಣೆಯನ್ನು ಘೋಷಣೆ ಮಾಡಿ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಬೈ ಎಲೆಕ್ಷನ್ ಘೋಷಣೆಯಾದ ದಿನದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಯಾವುದಾದರೂ ಅಹಿತಕರ ಘಟನೆ, ನೀತಿ ಸಂಹಿತೆ ಉಲ್ಲಂಘನೆಯಾಗುವ ಬಗ್ಗೆ ಆಧಾರಗಳ ಸಮೇತ ದೂರು ನೀಡಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಅಂತಾ ಮಂಜುನಾಥ್ ಪ್ರಸಾದ್ ತಿಳಿಸಿದರು.

ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಆ ಕ್ಷೇತ್ರದಲ್ಲಿ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರ ಯಾವುದೇ ಇಲಾಖೆಗಳಿಂದ ಕಾಮಗಾರಿಗಳನ್ನು ನಡೆಸುವಂತಿಲ್ಲ. ಈ ಬಗ್ಗೆ ಈಗಾಗಲೇ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಚುನಾವಣಾ ಗುರುತಿನ ಚೀಟಿಗಳನ್ನು ಬೇರೆಯವರಿಗೆ ಕೊಡುವುದು ಅಥವಾ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಬಾರದು. ಜೊತೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು. ಈ ಸಂಬಂಧ ಕೂಡಲೇ ನಗರ ಪೊಲೀಸ್ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ರು.

ಸಭೆಯ ಪ್ರಮುಖ ಅಂಶಗಳು:

  • ಅಕ್ಟೋಬರ್ 9 ರಿಂದ 16 ನೇ ತಾರೀಖಿನವರೆಗೆ ನಾಮಪತ್ರಗಳ ಸ್ವೀಕಾರ
  • ನಾಮಪತ್ರ ಸಲ್ಲಿಕೆ ವೇಳೆ ಇಬ್ಬರಿಗೆ ಮಾತ್ರ ಅವಕಾಶ, ಕಚೇರಿ ಬಳಿ ಸಿಸಿಟಿವಿ ಅಳವಡಿಕೆ
  • ನಾಮಪತ್ರ ಸಲ್ಲಿಸುವ ಕಚೇರಿಯ 100 ಮೀಟರ್ ವ್ಯಾಪ್ತಿಯಲ್ಲಿ 2 ವಾಹನಗಳ ನಿಲುಗಡೆಗೆ ಮಾತ್ರ ಅವಕಾಶ
  • ಈ ಬಾರಿ ಅಭ್ಯರ್ಥಿಗಳು ನಾಮಪತ್ರ, ಅಫಿಡವಿಟ್ ಹಾಗೂ ಠೇವಣಿ ಮೊತ್ತ ಆನ್‌ಲೈನ್​ನಲ್ಲಿ ಸಲ್ಲಿಸುವುದಕ್ಕೆ ಅವಕಾಶ
  • ಆನ್‌ಲೈನ್ ಮೂಲಕ ಸಲ್ಲಿಸಿರುವವರು ಅಫಿಡವಿಟ್​ನ ಹಾರ್ಡ್ ಕಾಪಿಯನ್ನು ರಿಟರ್ನಿಂಗ್ ಆಫೀಸರ್‌ಗೆ ನೇರವಾಗಿ ಸಲ್ಲಿಸಬೇಕು.
  • ಸಾರ್ವಜನಿಕ ಸಭೆ, ಪ್ರಚಾರ ಕಾರ್ಯಗಳಿಗೆ ನಿರ್ಬಂಧ, ಸಭೆ ನಡೆಸುವಂತಿದ್ದರೆ ಅನುಮತಿ ಕಡ್ಡಾಯ
  • ಮನೆ - ಮನೆ ಪ್ರಚಾರಕ್ಕೆ ಹೋಗಲು 5 ಮಂದಿಗೆ ಮಾತ್ರ ಅವಕಾಶ
  • ರೋಡ್ ಶೋನಲ್ಲಿ 5 ವಾಹನಗಳಿಗೆ ಮಾತ್ರ ಅವಕಾಶ
  • ನಿಯಮ ಉಲ್ಲಂಘಿಸಿದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ

ಆರ್​​.ಆರ್​. ನಗರ ವಿಧಾನಸಭಾ ಕ್ಷೇತ್ರದಲ್ಲಿ 381 ಮತಗಟ್ಟೆಗಳಿದ್ದು, ಒಟ್ಟು 4,60,401 ಮತದಾರರಿದ್ದಾರೆ. ಒಟ್ಟು 688 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಂದು ಮತಗಟ್ಟೆಯಲ್ಲಿ 1,000 ಮಂದಿಗೆ ಮಾತ್ರ ಮತದಾನ ಮಾಡಲು ಅನುಮತಿಯಿದೆ.

ಇವಿಎಮ್, ವಿವಿ ಪ್ಯಾಟ್ ಸಿದ್ಧವಿದ್ದು, 3 ಹಂತಗಳಲ್ಲಿ ಪರಿಶೀಲನೆ ನಡೆಸಲಾಗುವುದು. ಅದನ್ನು ಚುನಾಯಿತ ಪ್ರತಿನಿಧಿಗಳು ಕೂಡಾ ನೋಡಬಹುದಾಗಿದೆ. ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಚುನಾವಣಾ ಆಯೋಗವು ಅಬ್ಸರ್ವರ್ ತಂಡ ಕಳಿಸಲಿದೆ. ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದರೆ, ಅದರ ಬಗ್ಗೆ ದಾಖಲೆ ಸಮೇತ ದೂರು ನೀಡಿದಲ್ಲಿ ಅಂತಹ ಅಧಿಕಾರಿಯನ್ನು ಅಮಾನತು ಮಾಡಲಾಗುವುದು. ಜೊತೆಗೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details