ಬೆಂಗಳೂರು: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗವು ತಪಾಸಣೆ ಚುರುಕುಗೊಳಿಸಿದೆ. ನಿನ್ನೆ ಸುಮಾರು 72.30 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ನಿಪ್ಪಾಣಿ ಕ್ಷೇತ್ರದಲ್ಲಿ 25 ಲಕ್ಷ ರೂ. ಮೌಲ್ಯದ 23,880 ಲೀಟರ್ ಮದ್ಯ ಮತ್ತು ಶಿವಾಜಿನಗರ ಕ್ಷೇತ್ರದಲ್ಲಿ 58.59 ಲಕ್ಷ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಚಿಕ್ಕಪೇಟೆ ಕ್ಷೇತ್ರದಲ್ಲಿ 25 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 80.23 ಕೋಟಿ ರೂ. ನಗದು, 19.31 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. 52.23 ಕೋಟಿ ರೂ. ಮೌಲ್ಯದ 13.94 ಲಕ್ಷ ಲೀಟರ್ ಮದ್ಯ, 16.10 ಕೋಟಿ ರೂ. ಮೌಲ್ಯದ 1,084.03 ಕೆಜಿ ಮಾದಕ ವಸ್ತುಗಳು, 73.80 ಕೋಟಿ ರೂ. ಮೌಲ್ಯದ 145.55 ಕೆಜಿ ಚಿನ್ನ, 77.87 ಕೋಟಿ ರೂ. ಮೌಲ್ಯದ 727.45 ಕೆಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 245.76 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ :ಚುನಾವಣ ಕಣದಲ್ಲಿ ಝಣ ಝಣ ಕಾಂಚಾಣ.. ನಗದು, ಮದ್ಯ ಸೇರಿ ವಶಕ್ಕೆ ಪಡೆದ ವಸ್ತುಗಳ ಮೊತ್ತ 187 ಕೋಟಿ!