ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಗುರುವಾರ ಪೂರ್ವ ತಯಾರಿಯಾಗಿ ವಿಕಾಸಸೌಧದಲ್ಲಿ ರಾಜ್ಯದ ರಾಜಕೀಯ ಪಕ್ಷಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿತು. ರಾಜ್ಯದಲ್ಲಿ ಚುನಾವಣೆ ಪೂರ್ವ ತಯಾರಿ ಪರಿಶೀಲನೆ ನಡೆಸಲು ನಗರಕ್ಕೆ ಆಗಮಿಸಿರುವ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿತು.
ವಿಕಾಸಸೌಧದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜತೆ ಸುಮಾರು ಎರಡೂವರೆ ಗಂಟೆಗಳ ಕಾಲ ಭಾರತದ ಚುನಾವಣಾ ಆಯುಕ್ತರು ಸುದೀರ್ಘ ಸಮಾಲೋಚನೆ ನಡೆಸಿದರು. ಈ ವೇಳೆ ರಾಜಕೀಯ ಪಕ್ಷಗಳಿಂದ ಹಲವು ಸಲಹೆ, ಅಭಿಪ್ರಾಯಗಳು ವ್ಯಕ್ತಪಡಿಸಿದವು. ಮಧ್ಯಾಹ್ನ 2.30ಕ್ಕೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಜೊತೆ ಸಭೆ ಆರಂಭಿಸಿತು. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಜೊತೆ ಆರಂಭಗೊಂಡು ಬಿಎಸ್ಪಿ, ಬಿಜೆಪಿ, ಸಿಪಿಐ, ಸಿಪಿಐ(ಎಂ), ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಕೊನೆಯದಾಗಿ ಜೆಡಿಎಸ್ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿತು. ಈ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವು.
ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಅನೂಪ್ ಚಂದ್ರಪಾಂಡೆ, ಅರುಣ್ ಗೋಯಲ್ ಮತ್ತು ಉಪ ಆಯುಕ್ತರು ಸೇರಿದಂತೆ ಆಯೋಗದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸೇರಿದಂತೆ ರಾಜ್ಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಚುನಾವಣಾ ಆಯೋಗ ಮೂರು ದಿನಗಳ ಕಾಲ ನಿರಂತರ ಸಭೆಗಳನ್ನು ನಡೆಸಿ ರಾಜ್ಯದಲ್ಲಿ ಸಿದ್ದತೆ ಮತ್ತು ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಳ್ಳಲಿದೆ.
ಮುಕ್ತ, ಪಾರದರ್ಶಕ ಚುನಾವಣೆಗೆ ಕಾಂಗ್ರೆಸ್ ಮನವಿ: ವಿಎಸ್ ಉಗ್ರಪ್ಪ ಹಾಗೂ ಕಾಂಗ್ರೆಸ್ ಪರಿಷತ್ ಸದಸ್ಯ ಪಿಆರ್ ರಮೇಶ್ ಕಾಂಗ್ರೆಸ್ ಪರವಾಗಿ ಸಭೆಯಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ವಿಎಸ್ ಉಗ್ರಪ್ಪ, ವಿಧಾನಸಭೆ ಚುನಾವಣೆಯನ್ನು ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸುವಂತೆ ಮನವಿ ಮಾಡಲಾಗಿದೆ. ಮತಪಟ್ಟಿಯಲ್ಲಿ ಹೆಸರು ಕೈಬಿಟ್ಟ ಬಗ್ಗೆ ಮಾಹಿತಿ ನೀಡಿದ್ದೇವೆ. ಕೈಬಿಟ್ಟ 33 ಲಕ್ಷ ಮತದಾರರನ್ನು ಸೇರ್ಪಡೆ ಮಾಡಬೇಕು. ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮದ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಚಿಲುಮೆ ಅಕ್ರಮದ ತನಿಖಾ ವರದಿಯನ್ನು ಬಹಿರಂಗ ಪಡಿಸಬೇಕು ಎಂಬುದಾಗಿ ಮನವಿ ಮಾಡಲಾಗಿದೆ ಎಂದರು.
ಮತ ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪದೇ ಪದೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಈ ಹಿನ್ನೆಲೆ ತಕ್ಷಣ ನೀತಿ ಸಂಹಿತೆ ಜಾರಿಗೊಳಿಸಬೇಕು. ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ ಬಿಜೆಪಿ ಗೆಲುವು ಸಾಧಿಸಿದ ರಾಜ್ಯಗಳಲ್ಲಿ ಬಳಕೆ ಮಾಡಿದ್ದ ಇವಿಎಂ ರಾಜ್ಯದಲ್ಲಿ ಬಳಸಬಾರದು ಎಂಬುದಾಗಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.