ಬೆಂಗಳೂರು:ಅವಧಿ ಮುಗಿದಿರುವ ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧವಿದೆ. ವರ್ಷಾಂತ್ಯದೊಳಗೆ ಗ್ರಾ.ಪಂ. ಚುನಾವಣೆ ನಡೆಸುವುದು ಎಲ್ಲಾ ರೀತಿಯಲ್ಲೂ ಸೂಕ್ತ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಅವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಪೀಠಕ್ಕೆ ಮಾಹಿತಿ ನೀಡಿ, ಗ್ರಾಮ ಪಂಚಾಯತ್ಗಳಿಗೆ ಈಗಾಗಲೇ ಸಿದ್ಧಪಡಿಸಿರುವ ವೇಳಾ ಪಟ್ಟಿಯಂತೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಲು ಉದ್ದೇಶಿಸಿದೆ ಎಂದು ಚುನಾವಣಾ ಆಯೋಗದ ನಿಲುವನ್ನು ಸ್ಪಷ್ಟಪಡಿಸಿದರು.