ಬೆಂಗಳೂರು:ಸುಪ್ರೀಂಕೋರ್ಟ್ನ ಆದೇಶದ ಹಿನ್ನಲೆಯಲ್ಲಿ ಮುಂದೂಡಿಕೆಯಾಗಿದ್ದ ಉಪಚುನಾವಣೆಯನ್ನು ಚುನಾವಣಾ ಆಯೋಗ ದಿಢೀರ್ ಘೋಷಿಸಿದ್ದು, ರಾಜಕೀಯ ಪಕ್ಷಗಳಲ್ಲಿ ಗೊಂದಲ ಮೂಡಿದೆ.
ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿದ್ದ ಆಯೋಗ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ದಿನಾಂಕ ಮುಂದೂಡಿತ್ತು. ಆದರೆ, ಮತ್ತೆ ಚುನಾವಣಾ ಆಯೋಗ ಡಿಸೆಂಬರ್ 5ಕ್ಕೆ ಉಪಚುನಾವಣೆ ನಡೆಸುವುದಾಗಿ ದಿನಾಂಕ ನಿಗದಿಗೊಳಿಸಿದೆ. ಇತ್ತ ಸುಪ್ರೀಂಕೋರ್ಟ್‌ನಲ್ಲಿ ಯಾವ ರೀತಿಯ ತೀರ್ಪು ಬರಲಿದೆ ಎಂಬ ಆತಂಕ ಅನರ್ಹರನ್ನು ಕಾಡುತ್ತಿರುವ ಬೆನ್ನಲ್ಲೇ ಉಪ ಚುನಾವಣೆ ಘೋಷಣೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.
ಒಂದೇ ವಾರದಲ್ಲಿ ಎರಡು ರೀತಿಯ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳಲ್ಲಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಸುಪ್ರೀಂಕೋರ್ಟ್ ತೀರ್ಪಿಗೆ ಕಾಯಬೇಕೇ ಅಥವಾ ಆಯೋಗ ದಿನಾಂಕ ನಿಗದಿ ಮಾಡಿರುವಂತೆ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕೇ ಎಂಬ ಜಿಜ್ಞಾಸೆಯಲ್ಲಿ ರಾಜಕೀಯ ಪಕ್ಷಗಳಿಗೆ ಎದುರಾಗಿದೆ. ಯಾವುದೇ ಕ್ಷೇತ್ರ ತೆರವಾದರೂ ಆ ಕ್ಷೇತ್ರಗಳಿಗೆ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಆ ನಿಯಮಕ್ಕೆ ಒಳಪಟ್ಟು ಎರಡನೇ ಬಾರಿ ಚುನಾವಣಾ ದಿನಾಂಕವನ್ನು ಆಯೋಗ ಘೋಷಣೆ ಮಾಡಿದೆ.
ಸುಪ್ರೀಂಕೋರ್ಟ್‌ನಲ್ಲಿ ಸ್ಪೀಕರ್ ತಮ್ಮನ್ನು ಅನರ್ಹ ಮಾಡಿರುವ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದೇವೆ. ಅರ್ಜಿ ವಿಚಾರಣೆಯಾಗುವವರೆಗೂ ಚುನಾವಣಾ ದಿನಾಂಕ ನಿಗದಿ ಮಾಡಬಾರದೆಂದು 17 ಅನರ್ಹ ಶಾಸಕರು ಆಯೋಗದ ಮುಂದೆ ಮನವಿ ಮಾಡಿದ್ದರು. ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿರುವ ನಡುವೆಯೇ ಅಕ್ಟೋಬರ್ 21ಕ್ಕೆ ಆಯೋಗವು ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿತ್ತು. ಸುಪ್ರೀಂಕೋರ್ಟ್‌ನಲ್ಲಿ ಅನರ್ಹರ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಭಾಗಿದಾರರಾಗಿ ಚುನಾವಣೆ ಮುಂದೂಡಿಕೆಗೆ ಆಕ್ಷೇಪವಿಲ್ಲ ಎಂಬ ಅಭಿಪ್ರಾಯ ಸಹ ವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 22ಕ್ಕೆ ವಿಚಾರಣೆಯನ್ನು ಮುಂದೂಡಿತು. ಅದರಂತೆ ಅಂದು ಅನರ್ಹರ ಅರ್ಜಿ ವಿಚಾರಣೆ ನಡೆಯಲಿದೆ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಇರುವ ವಿವಾದ ಅಷ್ಟರೊಳಗೆ ಬಗೆಹರಿಯಬೇಕು. ಈಗ ಎಲ್ಲರ ಚಿತ್ತ ನ್ಯಾಯಾಲಯದತ್ತ ಹರಿದಿದೆ.