ಕರ್ನಾಟಕ

karnataka

ETV Bharat / state

ಆರೈಕೆ ಮಾಡದ ಮಗ-ಸೊಸೆ... ನೊಂದು ವಿಷ ಸೇವಿಸಿದ ವೃದ್ಧ ದಂಪತಿ

ಸಾಫ್ಟ್ ವೇರ್ ಎಂಜಿನಿಯರ್ ಪುತ್ರ ಮತ್ತು ಸೊಸೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಆರೋಪಿಸಿ ವೃದ್ಧ ದಂಪತಿ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಿರಿನಗರದಲ್ಲಿ ನಡೆದಿದೆ.

ವೃದ್ಧ ದಂಪತಿ ಸಾವು

By

Published : Aug 25, 2019, 1:58 AM IST

ಬೆಂಗಳೂರು:ಕೌಟುಂಬಿಕ ವಿಚಾರಕ್ಕೆ ವೃದ್ಧ ದಂಪತಿ ಡೆತ್‌ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಿರಿನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಗಿರಿನಗರ ನಿವಾಸಿ ಬಿಇಎಲ್‌ನ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ ಅವರ ಪತ್ನಿ ಸ್ವರ್ಣಮೂರ್ತಿ ಮೃತ ವೃದ್ಧರು. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಪುತ್ರ ಮಂಜುನಾಥ್ ಮತ್ತು ಸೊಸೆ ಸ್ನೇಹ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಆರೋಪಿಸಿ ಡೆತ್‌ನೋಟ್ ಬರೆದಿಟ್ಟು, ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 9 ಗಂಟೆಗೆ ಮಗ-ಸೊಸೆ ಕೆಲಸದಿಂದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣಮೂರ್ತಿ ದಂಪತಿ ಗಿರಿನಗರದ ನಾಲ್ಕನೇ ಹಂತದಲ್ಲಿ ಪುತ್ರ ಮಂಜುನಾಥ್, ಸೊಸೆ ಸ್ನೇಹ ಹಾಗೂ ಐದು ವರ್ಷದ ಮೊಮ್ಮಗನ ಜತೆ ವಾಸವಾಗಿದ್ದರು. ಮಗ ಮತ್ತು ಸೊಸೆ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಬೆಳಗ್ಗೆ ಎಂಟು ಗಂಟೆಗೆ ಕೆಲಸಕ್ಕೆ ಹೋದರೆ, ರಾತ್ರಿ 9 ಗಂಟೆಗೆ ಬರುತ್ತಿದ್ದರು. ಸ್ನೇಹ ತಮ್ಮ ಪುತ್ರನನ್ನು ಮನೆ ಸಮೀಪದಲ್ಲಿರುವ ತವರು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ವೃದ್ಧ ದಂಪತಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಈ ಮಧ್ಯೆ ಒಂದೂವರೆ ವರ್ಷಗಳಿಂದ ಸ್ವರ್ಣ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಹಾಸಿಗೆ ಹಿಡಿದಿದ್ದರು. ಹೀಗಾಗಿ ಕೃಷ್ಣಮೂರ್ತಿ ಅವರೇ ಪತ್ನಿಯನ್ನು ಆರೈಕೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಕೃಷ್ಣಮೂರ್ತಿ ಪುತ್ರ ಮಂಜುನಾಥ್ ಜತೆ ವಾಗ್ವಾದ ಕೂಡ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಮಂಜುನಾಥ್ ಒಂದೂವರೆ ತಿಂಗಳ ಹಿಂದೆ ಒಬ್ಬ ಮಹಿಳಾ ಸೇವಕಿಯನ್ನು ನೇಮಿಸಿದ್ದರು. ಆದರೆ, ಆಕೆ ಸರಿಯಾಗಿ ಆರೈಕೆ ಮಾಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತು ಶನಿವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಪುತ್ರ ಮತ್ತು ಸೊಸೆ ಕೆಲಸಕ್ಕೆ ಹೋಗುತ್ತಿದ್ದಂತೆ ಕೃಷ್ಣಮೂರ್ತಿ ವಿಷವನ್ನು ಪತ್ನಿ ಸ್ವರ್ಣ ಅವರಿಗೆ ಕುಡಿಸಿ, ಬಳಿಕ ತಾವು ಕುಡಿದು ಕೊಣೆಯೊಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್ ಸಂಬಂಧ ಮಂಜುನಾಥ್ ಮತ್ತು ಅವರ ಪತ್ನಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಂದೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಗಿರಿನಗರ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details