ಬೆಂಗಳೂರು: 2007ರಿಂದ ರಾಜ್ಯದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ 8 ರೈಲ್ವೆ ಯೋಜನೆಗಳಿಗೆ (Karnataka railway projects) ವೇಗ ನೀಡಿ ಕಾಲಮಿತಿಯಲ್ಲಿ ಭೂಸ್ವಾಧೀನ ಸೇರಿದಂತೆ ಎದುರಾಗಿರುವ ಸಮಸ್ಯೆ ಸರಿಪಡಿಸಿ ಕಾಮಗಾರಿ ಮುಗಿಸಬೇಕು ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ (Minister V.Somanna) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಇಂದು ಮೂಲಭೂತ ಸೌಕರ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ರೈಲ್ವೆ, ಕೆಐಡಿಸಿ ಎರಡನ್ನೂ ಕೂಡ ಸಂಕ್ಷಿಪ್ತವಾಗಿ ಪರಿಶೀಲನೆ ಮಾಡಿದ್ದೇವೆ. 2007 ರಿಂದ 8 ರೈಲ್ವೆ ಯೋಜನೆ ಆರಂಭವಾಗಿ, 9 ನೇ ಯೋಜನೆ ಕೈಗೆತ್ತಿಕೊಳ್ಳಲಾಗಿರಲಿಲ್ಲ, ಈಗ ಅಧಿಕಾರಿಗಳ ಜೊತೆ ಸಭೆ ನಡೆಸಿ ವಿಸ್ತೃತ ಚರ್ಚೆ ಮಾಡಿದ್ದೇನೆ. ಆರಂಭದಲ್ಲಿನ ಅಂದಾಜು ಪಟ್ಟಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡಕ್ಕೂ ಹೆಚ್ಚಿನ ಹೊರೆಯಾಗಲಿದೆ ಹಾಗಾಗಿ ಮಂದಗತಿ ಯೋಜನೆಗಳನ್ನು ತ್ವರಿತಗತಿಯಾಗಿ ಕೈಗೆತ್ತಿಕೊಳ್ಳಲು ನಿರ್ಧಾರಿಸಿದ್ದೇವೆ ಎಂದರು.
ಮುನಿರಾಬಾದ್-ಮೆಹಬೂಬ್ ನಗರ, ತುಮಕೂರು-ರಾಯದುರ್ಗ, ಬಾಗಲಕೋಟೆ ಕುಡಚಿ, ಗದಗ-ವಾಡಿ, ತುಮಕೂರು- ದಾವಣಗೆರೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ಚಿಕ್ಕಮಗಳೂರು-ಬೇಲೂರು, ಬೇಲೂರು-ಹಾಸನ, ಧಾರವಾಡ-ಬೆಳಗಾವಿ ಈ 8 ಯೋಜನೆಗಳ ಸಂಬಂಧ ಇನ್ನು 15-20 ದಿನದಲ್ಲಿ ಭೂಸ್ವಾಧೀನ ಪ್ರಕ್ರಿಯೆ, ಸಣ್ಣಪುಟ್ಟ ಸಮಸ್ಯೆ ಪರಿಹಾರಕ್ಕೆ ಸಮಯ ನಿಗದಿಪಡಿಸಿ, ಕಾಲಮಿತಿಯಲ್ಲಿ ಯೋಜನೆ ಮುಗಿಸಲು ಮಾತುಕತೆ ನಡೆಸಲಾಗಿದೆ. ತಿಂಗಳಿಗೊಮ್ಮೆ ಸಭೆ ನಡೆಸಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದು, ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆಗಳಿಗೆ ವೇಗ ನೀಡಲು ಅನುಮೋದನೆ ನೀಡಿದ್ದೇವೆ.
ಬೆಂಗಳೂರು ಸೇರಿ ಹಲವೆಡೆ 56 ರೈಲ್ವೆ ಕೆಳಸೇತುವೆ ಬರಲಿವೆ, ಇವುಗಳ ಬಗ್ಗೆ ಕೂಲಂಕುಷ ಚರ್ಚೆ ಮಾಡಿದ್ದು, ಇದಕ್ಕೊಂದು ರೂಪ ಕೊಡಲು ನಿರ್ಧಾರಿಸಿದ್ದೇವೆ, ನಮ್ಮ ಪಾಲಿನ ಹಣ ನಾವು ಬಿಡುಗಡೆ ಮಾಡಲಿದ್ದೇವೆ, ಕೇಂದ್ರದಿದಲೂ ಹಣ ಬಿಡುಗಡೆ ಆದಾಗ ವೇಗ ಸಾಧ್ಯ, ಕಾಮಗಾರಿಗಳ ಮಂದಗತಿ ಜನರಲ್ಲಿ ಆಲಸ್ಯ ಮೂಡಿಸಿದೆ ಹಾಗಾಗಿ ಇದಕ್ಕೆ ವೇಗ ನೀಡಲಿದ್ದೇವೆ. 56 ರೈಲ್ವೆ ಕೆಳಸೇತುವೆಗಳ ನಿರ್ಮಾಣ ಕಾರ್ಯವನ್ನು ಈ ವರ್ಷವೇ ಮುಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಶಿವಮೊಗ್ಗ, ವಿಜಯಪುರ, ಹಾಸನ ರಾಯಚೂರು ವಿಮಾನ ನಿಲ್ದಾಣ, ಕಾರವಾರ ಸಿವಿಲ್ ಎನ್ ಕ್ಲೀವ್ ನಿರ್ಮಾಣ ಪ್ರಾರಂಭಿಸಿದ್ದೇವೆ, ಯೋಚಿತ ಕಾರ್ಯಕ್ಕೆ ಆಧ್ಯತೆ ನೀಡಲು ನಿರ್ಧರಿಸಿದ್ದೇವೆ. ಕೆಂಪೇಗೌಡ ನಿಲ್ದಾಣಕ್ಕೆ ಕೂಡ ಇನ್ನು ಏನೇನು ಮಾಡಬೇಕು ಎಂದು ಚರ್ಚಿಸಲಾಗಿದೆ. ಎಲ್ಲ ಕಡೆ ಕಾಮಗಾರಿಗಳಿಗೆ ವೇಗ ನೀಡಲಾಗುತ್ತದೆ.
2007 ರಿಂದ ನೆನೆಗುದಿಗೆಗೆ ಬಿದ್ದ ಯೋಜನೆಗಳಿಗೆ ಆಧ್ಯತೆ ನೀಡಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ನಿರ್ಧಾರಿಸಿದ್ದು, ಯೋಜನೆಗಳಿಗೆ ಹಣಕಾಸಿನ ಕೊರತೆ ಇಲ್ಲ. ಅಗತ್ಯ ಪ್ರಮಾಣದ ಹಣ ಇದೆ, ಹಣವಿಲ್ಲದೆ ಯಾವ ಕೆಲಸವೂ ಆಗಲ್ಲ, ಯಾವ ಯಾವ ಯೋಜನೆ ಕೈಗೆತ್ತಿಕೊಂಡಿದ್ದೇವೋ ಅವುಗಳನ್ನು ಮುಗಿಸಲಿದ್ದೇವೆ. ಬೊಮ್ಮಾಯಿ ಬುದ್ದಿವಂತರಿದ್ದಾರೆ. ಅಗತ್ಯ ಹಣಕಾಸು ಒದಗಿಸುತ್ತಿದ್ದಾರೆ ಎಂದು ಹೇಳಿದರು.