ಬೆಂಗಳೂರು :ಜಾರಿ ನಿರ್ದೇಶನಾಲಯ (ಇಡಿ), ಸಿಬಿಐಯಂತಹ ಸ್ವಾಯತ್ತ ಸಂಸ್ಥೆಗಳು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಡಿ ಅಥವಾ ಸಿಬಿಐ ಸಂಸ್ಥೆಗಳ ಮೇಲೆ ಯಾರೂ ಪ್ರಭಾವ ಬೀರಿಲ್ಲ. ಇಲ್ಲಿ ರಾಜಕೀಯ ದ್ವೇಷದ ಪ್ರಶ್ನೆಯೇ ಬರುವುದಿಲ್ಲ ಎಂದರು.
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದೇ ಇಡಿ, ಸಿಬಿಐ ಮೂಲಕ ಹಲವಾರು ರಾಜಕೀಯ ನಾಯಕರ ಪ್ರಕರಣಗಳ ವಿಚಾರಣೆ ನಡೆಸಿಲ್ಲವೇ? ಎಂದು ಪ್ರಶ್ನಿಸಿದರು. ಡಿ.ಕೆ ಶಿವಕುಮಾರ್ ಬಂಧನದ ಕಾರಣಕ್ಕೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುವುದು ಸರಿಯಲ್ಲ. ಶಾಂತಿಯುತ ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ ಎಂದು ಹೇಳಿದರು.
ಕಾನೂನು ಕೈಗೆತ್ತಿಕೊಂಡು ಹಿಂಸಾಚಾರ ನಡೆಸಿದರೆ ಪೊಲೀಸರು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ.