ಬೆಂಗಳೂರು:ತಂತ್ರಜ್ಞಾನ ಬೆಳೆದಂತೆಲ್ಲ ದುರ್ಬಳಕೆ ಮಾಡಿಕೊಳ್ಳುವವರ ಪ್ರಮಾಣ ಹೆಚ್ಚಾಗುತ್ತಿದೆ. ಕಸ್ಟಮರ್ ಕೇರ್ ಸೋಗಿನಲ್ಲಿ ತರಹೇವಾರಿ ರೀತಿಯಲ್ಲಿ ಸೈಬರ್ ಖದೀಮರು ಸಾರ್ವಜನಿಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ. ಇಂತಹ ವಂಚನೆ ಸಾಲುಗಳ ಪಟ್ಟಿಯಲ್ಲಿ ಹೊಸ ಸೇರ್ಪಡೆ ಎಲೆಕ್ಟ್ರಾನಿಕ್ ಸೀಮ್ ಆಕ್ಟೀವೇಷನ್.
ಹೌದು, ಏರ್ಟೆಲ್ ಕಸ್ಟಮರ್ ಕೇರ್ ಸೋಗಿನಲ್ಲಿ ಯುವತಿಗೆ ಕರೆ ಮಾಡಿ ಸೈಬರ್ ಖದೀಮರು ಇ-ಸೀಮ್ ಆ್ಯಕ್ಟಿವೇಷನ್ ಮಾಡುವುದಾಗಿ ಹೇಳಿ ನಂಬರ್ ಹ್ಯಾಕ್ ಮಾಡಿಕೊಂಡು ಸಾವಿರಾರು ರೂಪಾಯಿ ದೋಚಿದ್ದಾರೆ.
ಬೆಳ್ಳಂದೂರು ನಿವಾಸಿ ಸೃಷ್ಟಿದಾಸ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇದೇ ತಿಂಗಳು 14 ರಂದು ಏರ್ಟೆಲ್ ಕಂಪನಿಯ ಕಸ್ಟಮರ್ ಕೇರ್ ಸೋಗಿನಲ್ಲಿ ಯುವತಿಗೆ ಕರೆ ಮಾಡಿದ್ದಾನೆ. ಕಂಪನಿಯಿಂದ ಇ-ಸೀಮ್ ಆಗಿ ಪರಿವರ್ತಿಸಲಾಗುತ್ತಿದ್ದು, ನಿಮ್ಮ ಸೀಮ್ ಸಹ ಇ-ಸೀಮ್ಗಳಾಗಿ ಪೋರ್ಟ್ ಮಾಡುವುದಾಗಿ ಯುವತಿಗೆ ಹೇಳಿದ್ದಾನೆ.
ಆರಂಭದಲ್ಲಿ ಪೋರ್ಟ್ಗೆ ಒಪ್ಪಿಕೊಳ್ಳದ ಯುವತಿ ತದನಂತರ ಖದೀಮರ ಮಾತಿಗೆ ಮರುಳಾಗಿ ಒಪ್ಪಿಕೊಂಡಿದ್ದಾಳೆ. ಪೋರ್ಟ್ ಮಾಡುವಾಗ ಎರಡು ಗಂಟೆ ಸೀಮ್ ನಿಷ್ಕ್ರಿಯವಾಗಿರಲಿದೆ ಎಂದು ವಂಚಕ ಸೂಚನೆ ನೀಡಿದ್ದಾನೆ. ಸೀಮ್ ನಿಷ್ಕ್ರಿಯವಾಗುವ ಮುನ್ನ ಬ್ಯಾಂಕಿಂಗ್ ವಿವರ ತಿಳಿದುಕೊಂಡು ಯುವತಿ ಮೊಬೈಲ್ಗೆ ಬಂದ ಒಟಿಪಿ ಸಹ ಪಡೆದುಕೊಂಡಿದ್ದಾರೆ. ಒಟಿಪಿ ಪಡೆದುಕೊಂಡು ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು ಏಳು ಸಾವಿರ ರೂ. ಎಗರಿಸಿದ್ದಾರೆ. ಇದಾದ ನಂತರ ಯುವತಿಯ ಸ್ನೇಹಿತರಿಗೆ ಕರೆ ಮಾಡಿ ತೊಂದರೆಗೆ ಸಿಲುಕಿದ್ದು, 50 ಸಾವಿರ ನೀಡುವಂತೆ ಸಂದೇಶ ರವಾನಿಸಿದ್ದಾರೆ. ಇದರಿಂದ ಅನುಮಾನಗೊಂಡ ಯುವತಿಗೆ ಸ್ನೇಹಿತೆಯರು ಕರೆ ಮಾಡಿದಾಗ ವಿಚಾರ ಬೆಳಕಿಗೆ ಬಂದಿದೆ. ವಂಚನೆ ಸಂಬಂಧ ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ.