ನವದೆಹಲಿ/ಬೆಂಗಳೂರು: ಕೊರೊನಾ ಸಂಕಷ್ಟದ ಹಿನ್ನೆಲೆ ಉಂಟಾದ ಆರ್ಥಿಕ ಹಿಂಜರಿತದ ಮಧ್ಯೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಶಯದೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮತೋಲಿತ ಬಜೆಟ್ ಮಂಡಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿಯ ಬಜೆಟ್: ಡಿವಿಎಸ್, ಬೊಮ್ಮಾಯಿ, ಸವದಿ ಪ್ರಶಂಸೆ - ಬಜೆಟ್
ರಾಜ್ಯ ಬಜೆಟ್ ಉತ್ತಮವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನೂ ಸಚಿವ ಬಸವರಾಜ ಬೊಮ್ಮಾಯಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ಸಂಕಷ್ಟ ಸಂದರ್ಭದಲ್ಲಿಯೂ ಮಂಡಿಸಿದ 2021-22 ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದೆ. ಯಾವುದೇ ಹೊಸ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹೊರಿಸದೇ ಪ್ರಗತಿಗೆ ಇಂಬು ಕೊಡುವ ಸಮತೋಲಿತ ಬಜೆಟ್ ಕೊಟ್ಟಿದ್ದಾರೆ. ಕೃಷಿ, ನೀರಾವರಿ, ಮಹಿಳೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಮೂಲಸೌಕರ್ಯ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಪ್ರಾಧಾನ್ಯತೆ ನೀಡಲಾಗಿದೆ ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಈ ಬಜೆಟ್ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ಸಮತೋಲನ ಸಾಧಿಸುವಲ್ಲಿ ಈ ಬಜೆಟ್ ಯಶಸ್ವಿಯಾಗಿದೆ. ಸಾರಿಗೆ ವಲಯಕ್ಕೂ ಹಲವು ಹೊಸ ಕಾರ್ಯಕ್ರಮಗಳೊಂದಿಗೆ ಪುನಶ್ಚೇತನ ನೀಡುವ ಪ್ರಯತ್ನಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.