ಬೆಂಗಳೂರು:ನಗರದಲ್ಲಿ ಇರುವ ಕೇಂದ್ರ ಆಯುಷ್ ಇಲಾಖೆಯ ಆಯುರ್ವೇದ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯನ್ನು ಇನ್ನೆರಡು ವಾರಗಳಲ್ಲಿ 100 ಹಾಸಿಗೆಯ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ರಾಜ್ಯ ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಅವರೊಂದಿಗೆ ಉತ್ತರಹಳ್ಳಿ ಹೋಬಳಿಯಲ್ಲಿ ಇರುವ ಆಯುಷ್ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವರು ಸಂಸ್ಥೆಯ ನಿರ್ದೇಶಕಿ ಡಾ ಸುಲೋಚನಾ ಭಟ್, ಹಿರಿಯ ಅಧಿಕಾರಿಗಳು, ಲ್ಯಾಂಡ್ ಆರ್ಮಿ ಇಂಜಿನಿಯರ್ಗಳ ಜೊತೆ ತ್ವರಿತವಾಗಿ ಇದನ್ನು ಕೋವಿಡ್ ಸೋಂಕಿತರ ಆರೈಕೆಗೆ ಸಿದ್ಧಪಡಿಸುವ ಬಗ್ಗೆ ಚರ್ಚಿಸಿದರು.
ನಂತರ ಮಾತನಾಡಿದ ಸದಾನಂದ ಗೌಡ ಅವರು, ಇನ್ನು 2 ವಾರಗಳಲ್ಲಿ ಕೋವಿಡ್ ಸೋಂಕಿತರ ಸೇವೆಗೆ ಲಭ್ಯವಾಗಲಿದೆ. 100 ಆಮ್ಲಜನಿಕ ಲಭ್ಯ ಹಾಸಿಗೆಗಳು ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಸಚಿವರು ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಇನ್ನೂ ಎರಡು ತಾತ್ಕಾಲಿಕ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು. ಚನ್ನೇನಹಳ್ಳಿಯಲ್ಲಿ ಸಂಘದ (ಆರ್ಎಸ್ಎಸ್) ಜನಸೇವಾ ವಿದ್ಯಾಕೇಂದ್ರ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರ ಹಾಗೂ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ಆರಂಭಿಸಿರುವ ತಾತ್ಕಾಲಿಕ ಕೋವಿಡ್ ಶುಶ್ರೂಷಾ ಕೇಂದ್ರಕ್ಕೆ ಕೂಡ ಸದಾನಂದ ಗೌಡರು ಭೇಟಿ ನೀಡಿದ ಸಂದರ್ಭದಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಉಪಸ್ಥಿತರಿದ್ದರು.