ಬೆಂಗಳೂರು:ಚುನಾವಣೆ ರಾಜಕೀಯಕ್ಕೆ ವಿದಾಯ ಘೋಷಿಸಿರುವ ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಬಿಜೆಪಿ ಹೈಕಮಾಂಡ್ ಬಯಸಿದರೆ ಚುನಾವಣೆ ರಾಜಕೀಯ ನಿವೃತ್ತಿ ನಿರ್ಧಾರ ಹಿಂದಕ್ಕೆ ಪಡೆಯುವ ಸುಳಿವನ್ನು ನೀಡಿದ್ದಾರೆ.
ಪಕ್ಷವು ಅಪೇಕ್ಷೆ ಪಟ್ಟರೆ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ಸದಾನಂದಗೌಡರು ''ಈಟಿವಿ ಭಾರತ''ಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಿವೃತ್ತಿ ನಿರ್ಧಾರದ ಬಗ್ಗೆ ಲೊಕಸಭೆ ಸದಸ್ಯ ಸದಾನಂದಗೌಡರು ಸಂದರ್ಶನದಲ್ಲಿ ವ್ಯಕ್ತಪಡಿಸಿದ ಮನದಾಳದ ಮಾತುಗಳು ಇಲ್ಲಿವೆ.
ಪ್ರಶ್ನೆ: ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ನಿವೃತ್ತಿ ಘೋಷಣೆ ಮಾಡಿದ್ದನ್ನು ಮರು ಪರೀಕ್ಷೆ ಮಾಡುತ್ತೀರಾ?
ಉತ್ತರ: ಬಿಜೆಪಿ ಪಕ್ಷವು, ನನಗೆ ಎಲ್ಲ ಸ್ಥಾನಮಾನವನ್ನು ಕೊಟ್ಟಿದೆ. ಗ್ರಾಮೀಣ ಭಾಗದಿಂದ ಬಂದ ನನಗೆ ರಾಜ್ಯದಲ್ಲಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಸಚಿವ ಸ್ಥಾನ ಸೇರಿದಂತೆ ಹಲವಾರು ಮಹತ್ವದ ಜವಾಬ್ದಾರಿಗಳನ್ನು ನೀಡಿದೆ. ನಾನು ಒಬ್ಬ ಸಂತೃಪ್ತ ರಾಜಕಾರಣಿ. ರಾಜಕಾರಣದಲ್ಲಿ 40 ವರ್ಷ ವಯೋಮಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅವಕಾಶ ಸಿಗಬೇಕು ಎನ್ನುವ ಕಾರಣದಿಂದ ನಾನು ಚುನಾವಣೆ ರಾಜಕೀಯದಿಂದ ನಿವೃತ್ತಿಯನ್ನು ಘೋಷಣೆ ಮಾಡಿದ್ದೇನೆ. ಆದರೆ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ನಾನು ಸಕ್ರಿಯವಾಗಿ ಇರುತ್ತೇನೆ. ನನ್ನ ಕ್ಷೇತ್ರದ ಕಾರ್ಯಕರ್ತರು ಬಿಜೆಪಿಯ ಪ್ರಮುಖ ಮುಖಂಡರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು ಶಾಸಕರು ಸೇರಿದಂತೆ ಹಲವಾರು ನಾಯಕರು ಕಳೆದ ಹತ್ತು ದಿನಗಳಲ್ಲಿ ಮನೆಗೆ ಬಂದು ಭೇಟಿ ಮಾಡಿ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸತೊಡಗಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ, ಶಾಂತಿ ಮತ್ತು ನೆಮ್ಮದಿ ತಂದಿದೆ, ನನ್ನ ಸ್ಪರ್ಧೆ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡಿಲ್ಲ, ಸ್ಪರ್ಧೆ ಬಗ್ಗೆ ನಾನು ಸದ್ಯಕ್ಕೆ ಮೌನ ವಹಿಸಿದ್ದೇನೆ.
ಪ್ರಶ್ನೆ: ಚುನಾವಣೆಗೆ ಸ್ಪರ್ಧಿಸಲು ನಿಮ್ಮ ಮೇಲೆ ಹೆಚ್ಚಿನ ಒತ್ತಡವಿರುವುದರಿಂದ ನಿವೃತ್ತಿ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುತ್ತೀರಾ.?
ಉತ್ತರ: ಈ ಬಗ್ಗೆ ನಾನಿನ್ನೂ ತೀರ್ಮಾನ ಮಾಡಿಲ್ಲ ಆಲೋಚನೆ ಸಹ ಮಾಡಿಲ್ಲ. ಹಲವಾರು ಜನರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಬೇಕು. ಕುಟುಂಬದವರ ಜೊತೆಗೂ ಸಹ ಆಲೋಚನೆ ಮಾಡಬೇಕು. ಪಕ್ಷ ಸುಪ್ರೀಂ, ಪಕ್ಷದ ಹೈಕಮಾಂಡ್ ಅಪೇಕ್ಷೆ ಪಟ್ಟರೆ ಅನಿವಾರ್ಯತೆ ಕಂಡುಬಂದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ನನ್ನ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡುತ್ತೇನೆ. ಪ್ರಧಾನಿ ಮೋದಿ ಅವರು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆನ್ನುವುದು ನಮ್ಮೆಲ್ಲರ ಆಸೆಯಾಗಿದೆ. ಅದಕ್ಕಾಗಿ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ. ಸದ್ಯಕ್ಕೆ ಚುನಾವಣೆಯ ರಾಜಕೀಯ ನಿವೃತ್ತಿ ನಿರ್ಧಾರವನ್ನು ನಾನು ಬಾಕಿಯಿರಿಸಿದ್ದೇನೆ. ಒತ್ತಡವನ್ನು ತಿರಸ್ಕಾರ ಮಾಡುವುದಿಲ್ಲ, ಸ್ಪರ್ಧೆ ಬಗ್ಗೆ ಒಪ್ಪಿಯೂ ಇಲ್ಲ, ಸ್ಪರ್ಧಿಸುವುದಿಲ್ಲ ಅಂತ ಹೇಳುವುದೂ ಇಲ್ಲ. ಸದ್ಯ ತಟಸ್ಥ ನಿಲುವು ನನ್ನದಾಗಿದೆ.
ಪ್ರಶ್ನೆ:ಚುನಾವಣೆ ಸ್ಪರ್ಧೆ ಬಗ್ಗೆ ಕೊನೆ ಕ್ಷಣದಲ್ಲಿ ತೀರ್ಮಾನ ತೆಗೆದುಕೊಂಡರೆ ಚುನಾವಣೆ ಸಿದ್ಧತೆಗೆ ಸಮಯ ಎಲ್ಲಿ ಸಿಗುತ್ತೆ?