ಕರ್ನಾಟಕ

karnataka

ETV Bharat / state

ಪರೀಕ್ಷೆ ವೇಳೆ ವಿದ್ಯುತ್ ತೊಂದರೆಯಾಗಲ್ಲ, ಬೇಸಿಗೆ ವಿದ್ಯುತ್ ಬೇಡಿಕೆ ಪೂರೈಕೆಗೆ ಸಿದ್ಧ: ಸುನೀಲ್ ಕುಮಾರ್

ರಾಜ್ಯ ಸರ್ಕಾರದ ಆದ್ಯತೆ ರೈತರಿಗೆ 7 ಗಂಟೆ ಕಾಲ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಗುರಿ ಇದೆ- ಸಚಿವ ಸುನೀಲ್​ ಕುಮಾರ್​.

Energy Minister Sunil Kumar
ಇಂಧನ ಸಚಿವ ಸುನೀಲ್ ಕುಮಾರ್

By

Published : Feb 13, 2023, 2:16 PM IST

ಬೆಂಗಳೂರು :ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಬೇಸಿಗೆಯಲ್ಲಿ ರೈತರ ಪಂಪ್ ಸೆಟ್​ಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಹಾಗೂ ಬೇಸಿಗೆ ವಿದ್ಯುತ್ ಬೇಡಿಕೆ ಪೂರೈಕೆಗೆ ಸರ್ಕಾರ ಸಿದ್ಧವಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದದಲ್ಲಿ ಸದಸ್ಯ ರುದ್ರೇಗೌಡ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಫೆಬ್ರವರಿಯಲ್ಲಿಯೇ ನಾವು ವಿದ್ಯುತ್ ಬಳಕೆಯಲ್ಲಿ 15,016 ಮೆಗಾವ್ಯಾಟ್ ತಲುಪಿದ್ದೇವೆ. ಬೇಸಿಗೆಯಲ್ಲಿ 15.5 ಸಾವಿರ ಮೆಗಾವ್ಯಾಟ್ ತಲುಪಲಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಸೋಲಾರ್ ರೂಫ್ ಟಾಪ್ ಗೆ ಅನುಕೂಲ ಮಾಡಲಾಗುತ್ತಿದೆ. ಕಳೆದ ಬಾರಿ 1,48,000 ಮೆಗಾವ್ಯಾಟ್ ಬೇಡಿಕೆ ಬಂದರೂ ಸರಬರಾಜು ಮಾಡಿದ್ದೇವೆ. ಬೇಸಿಗೆಯಲ್ಲಿ ರೈತರಿಗೆ ಮತ್ತು ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪಂಪ್ ಸೆಟ್ ಗೆ 7 ಗಂಟೆ ನಿರಂತರ ವಿದ್ಯುತ್ :ರಾಜ್ಯದ ಎಲ್ಲ ರೈತರ ಪಂಪ್ ಸೆಟ್​ಗಳಿಗೆ ನಿರಂತರ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಆ ನಿಟ್ಟಿನಲ್ಲಿ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು. ಕಲಾಪದಲ್ಲಿ ಜೆಡಿಎಸ್​ ಸದಸ್ಯ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿ, ಎಲ್ಲ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಧಾನ ಮಂತ್ರಿ ಕುಸಿಮ್ ಸಿ ಯೋಜನೆ ಜಾರಿಗೆ ತರಲಾಗಿದೆ.

ಹಸಿರು ವಿದ್ಯುತ್ ಉತ್ಪಾದನೆ ಕಡೆ ಹೊರಟಿದ್ದು, ಸೋಲಾರ್ ಫೀಡರ್ ಗಳಿಂದ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸಲಾಗುತ್ತದೆ. ಇದಕ್ಕೆ ಟೆಂಡರ್ ಕರೆಯಲಾಗಿದೆ. ನಮ್ಮ ಸರ್ಕಾರದ ಆದ್ಯತೆ ರೈತರಿಗೆ 7 ಗಂಟೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆ ಗುರಿ ಇದೆ. ಕೆಲವೆಡೆ ಲೋಪವಾಗಿದೆ ಅದನ್ನೂ ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು.

ಇನ್ನೂ ಮಾಜಿ ಸೈನಿಕರಿಗೆ ವಿದ್ಯುತ್ ಸಬ್ಸಿಡಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು. ರೈತರ ಒಂಪ್ ಸೆಟ್​ಗಳಿಗಾಗಿ 12 ಸಾವಿರ ಕೋಟಿ ಹಣ ಸಬ್ಸಿಡಿ ಪ್ರತಿ ವರ್ಷ ಕೊಡಲಾಗುತ್ತಿದೆ. ಕುಸಿಮ್ ಬಿ ಮತ್ತು ಸಿ ಬೇರೆ ಬೇರೆ ಯೋಜನೆ, ಸಿ ಯೋಜನೆಯ ವೈಯಕ್ತಿಕ ಪಂಪ್ ಸೆಟ್ ಹಾಕಲು ಸಬ್ಸಿಡಿ, ಸಿ ಅಡಿ ಫೀಡರ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎರಡೂ ಯೋಜನೆಗೆ ಟೆಂಡರ್ ಕರೆದಿದ್ದು ಆದಷ್ಟು ಬೇಗ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಉಚಿತ ಯೋಜನೆ ಮೂಲಕ ಹೆಸ್ಕಾಂ ದಿವಾಳಿ ಮಾಡಲ್ಲ :ಉಚಿತ ಯೋಜನೆಗಳ ಮೂಲಕ ಹೆಸ್ಕಾಂಗಳನ್ನು ದಿವಾಳಿಯನ್ನಾಗಿಸಲು ನಮ್ಮ ಸರ್ಕಾರ ಸಿದ್ದವಿಲ್ಲ, ಗುಣಮಟ್ಟದ ಮತ್ತು ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು. ಸದಸ್ಯ ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾಗ್ಯಜ್ಯೋತಿ ಅಡಿ 40 ಯೂನಿಟ್ ಉಚಿತ ನೀಡುತ್ತಿದ್ದು 26.80 ಲಕ್ಷ ಜನ ಫಲಾನುಭವಿ ಇದ್ದಾರೆ. ಇದರಲ್ಲಿ 40 ಯೂನಿಟ್ ಮೀರಿದರೆ ಅದಕ್ಕೆ ಹಣಪಾವತಿಸಬೇಕು ಇದಕ್ಕೆ ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು.

ಉಚಿತ ಪಂಬ್​ ಸೆ‌ಟ್ ಅಡಿ 33.46 ಲಕ್ಷ ಫಲಾನುಭವಿ ಇದ್ದು, 24 ಲಕ್ಷ ಎಸ್ಸಿಎಸ್ಟಿ ಫಲಾನುಭವಿಗಳಿದ್ದಾರೆ. ಉಚಿತದ ಭರಾಟೆಯಲ್ಲಿ ಹೆಸ್ಕಾಂಗಳನ್ನು ಸಾಲಕ್ಕೆ ದೂಡುತ್ತಿದ್ದೇವೆ, ಆದರೆ ಈಗ ನಾವು ಅದಕ್ಕೆ ಅವಕಾಶ ನೀಡಲ್ಲ, ಯಾವುದೋ ಉಚಿತ ಯೋಜನೆ ಮೂಲಕ ಹೆಸ್ಕಾಂ ದುವಾಳಿ ಮಾಡಲು ಸಿದ್ದವಾಗಿಲ್ಲ, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆ ಮಾಡುವುದೇ ನಮ್ಮ ಗುರಿಯಾಗಿದೆ ಅದಕ್ಕೆ ತಕ್ಕ ರೀತಿ ಕ್ರಮ ವಹಿಸಲಾಗುತ್ತದೆ ಎಂದು ಸುನೀಲ್​ ಕುಮಾರ್​ ತಿಳಿಸಿದರು.

ವಿದ್ಯುತ್ ದರ ಹೆಚ್ಚಳ ಪ್ರಸ್ತಾಪವಿಲ್ಲ :ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಹೆಚ್ಚಿಸುವ ಕುರಿತು ಯಾವುದೇ ಪ್ರಸ್ತಾಪವು ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು. ಕಲಾಪದ ಶೂನ್ಯ ವೇಳೆಯಲ್ಲಿ ಸದಸ್ಯ ನಾಗರಾಜ್ ಪ್ರಶ್ನೆಗೆ ಉತ್ತರಿಸಿ, ವಿದ್ಯುತ್ ಬೆಲೆ ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ, ಹೆಸ್ಕಾಂಗಳು ಪ್ರಸ್ತಾವನೆ ಸಲ್ಲಿಸುವುದು ವಾಡಿಕೆ, ಆ ಪ್ರಸ್ತಾವನೆ ವಿದ್ಯುತ್ ಬೆಲೆ ನಿಯಂತ್ರಣ ಆಯೋಗದ ಮುಂದೆ ಹೋಗಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಬೇಕು. ನಂತರ ನಿರ್ಧಾರಕ್ಕೆ ಬರುತ್ತದೆ ಆದರೆ ಸದ್ಯಕ್ಕೆ ನಮ್ಮ ಮುಂದೆ ವಿದ್ಯುತ್ ದರ ಹೆಚ್ಚಳ ಮಾಡುವ ಪ್ರಸ್ತಾಪ ಇಲ್ಲ ಎಂದರು.

ಇದನ್ನೂ ಓದಿ :ಕೊನೆಯ ತ್ರೈಮಾಸಿಕದಲ್ಲಿ ಆರ್​ಬಿಐದಿಂದ ಸಾಲ ಎತ್ತುವಳಿಗೆ ಬೊಮ್ಮಾಯಿ‌ ಸರ್ಕಾರ ಕೊಂಚ ಬ್ರೇಕ್

ABOUT THE AUTHOR

...view details