ಬೆಂಗಳೂರು: ಡ್ರಗ್ಸ್ ನಿರ್ಮೂಲನೆಗಾಗಿ ಪೊಲೀಸರು ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಪೂರಕ ಎಂಬಂತೆ ಕಳೆದ ಮೂರು ದಿನಗಳ ಹಿಂದೆ 8 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ವಶಪಡಿಸಿಕೊಂಡಿದ್ದ ದಕ್ಷಿಣ ವಿಭಾಗದ ಪೊಲೀಸರು ಇದೀಗ ಬುಕ್ ಮಾದರಿಯಲ್ಲಿದ್ದ ಡ್ರಗ್ಸ್ ಬುಕ್ ಜಪ್ತಿ ಮಾಡಿಕೊಂಡಿದ್ದಾರೆ.
ಡ್ರಗ್ಸ್ ಲೋಕದಲ್ಲಿ ವಿನೂತನ ಪ್ರಯೋಗ ಮಾಡಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಡ್ರಗ್ಸ್ ಬುಕ್ ನಲ್ಲಿ ಅಂದಾಜು 10 ಲಕ್ಷ ಮೌಲ್ಯದ 100 ಗ್ರಾಂ ಮೌಲ್ಯದ ಕಿಸ್ಟೆಲ್ಸ್, 26 ಎಂಡಿಎಂ ಮಾತ್ರೆಗಳು ಹಾಗೂ ಕೊಕೇನ್ ಅನ್ನೂ ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಇದರ ಆರೋಪಿ ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಠಾಣೆಯ ಪೊಲೀಸರು ಆರೋಪಿ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಏಪ್ರಿಲ್ 10ರಂದು ನೈಜೀರಿಯಾ ಮೂಲದ ವ್ಯಕ್ತಿಯು ಬಸವನಗುಡಿಯಲ್ಲಿ ಡ್ರಗ್ಸ್ ಸಾಗಣೆ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣ ಈ ಬಗ್ಗೆ ಕಾರ್ಯ ಸನ್ನದ್ದರಾದ ಪೊಲೀಸರು ಆರೋಪಿ ಕಂಡು ಹಿಡಿಯಲು ಮುಂದಾದರು. ಆಗ ತಕ್ಷಣ ಎಚ್ಚೆತ್ತುಕೊಂಡ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಎಸ್ಕೇಪ್ ಆಗುವ ಆತಂಕದಲ್ಲಿ ಕೈಯಲ್ಲಿದ್ದ ದಿ ನ್ಯೂ ಇಂಗ್ಲೀಷ್ ಡಿಕ್ಷನರಿ ಹೆಸರಿನ ಬುಕ್ ಬೀಳಿಸಿ ಕಣ್ಮರೆಯಾಗಿದ್ದಾನೆ. ಬಿದ್ದಿದ್ದ ಪುಸ್ತಕ ಕಂಡು ಪರಿಶೀಲಿಸಿದಾಗ ಒಂದು ಕ್ಷಣ ಪೊಲೀಸರೇ ದಂಗಾಗಿದ್ದಾರೆ.
ಆ ಇಂಗ್ಲಿಷ್ ಬುಕ್‌ನಲ್ಲಿ ಏನಿದೆ ?:ಸಾಮಾನ್ಯವಾಗಿ ಬುಕ್ ನೋಡಿದರೆ ಇಂಗ್ಲಿಷ್ ಡಿಕ್ಷನರಿ ಎನ್ನುವಂತೆ ಕಾಣಿಸುತ್ತದೆ. ಆದರೆ, ಆ ಬುಕ್ ನೋಡಿದಾಗ ದಂಧೆಕೋರನ ಕರಾಮತ್ತು ಬಯಲಾಗಿತ್ತು. ಬುಕ್ ಓಪನ್ ಮಾಡಿದಾಗ ಲಾಕರ್ ಇರುವುದನ್ನು ಕಂಡಿದ್ದಾರೆ. ಅದಕ್ಕೆ ಪಾಸ್ ವರ್ಡ್ ಸಹ ನಮೂದಿಸಿದ್ದನು. ಮಾರಾಟಕ್ಕಾಗಿ ಬಂದಿದ್ದ ಆರೋಪಿ ಭಯದಲ್ಲಿ ಪಾಸ್ ವರ್ಡ್ ಹಾಕುವುದನ್ನು ಮರೆತು ಬಿಟ್ಟಿದ್ದ ಲಾಕರ್ ಓಪನ್ ಮಾಡಿದಾಗ 10 ಲಕ್ಷ ಮೌಲ್ಯದ ಕಿಸ್ಟೆಲ್ಸ್, ಎಂಡಿಎಂಎ ಮಾತ್ರೆಗಳು ಹಾಗೂ ಕೊಕೇನ್ ಇರುವುದನ್ನು ಪೊಲೀಸರು ಕಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನೈಜೀರಿಯಾ ಮೂಲದ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ದಕ್ಷಿಣ ವಿಭಾಗದ ಕೃಷ್ಣಕಾಂತ್ ತಿಳಿಸಿದ್ದಾರೆ.