ಬೆಂಗಳೂರು:ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಕೇರಳದ ಮಾಜಿ ಗೃಹ ಸಚಿವ ಬಾಲಕೃಷ್ಣನ್ ಕೊಡಿಯೇರಿ ಪುತ್ರ ಬಿನೇಶ್ ಕೊಡಿತೆರ್ ಅವರನ್ನ ಶಾಂತಿನಗರ ಬಳಿ ಇರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗಿದೆ.
ಈಗಾಗಲೇ ಎನ್ಸಿಬಿಯಿಂದ ಬಂಧಿತನಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಅನೂಪ್ ಜತೆ ನಂಟು ಹೊಂದಿರುವ ಕಾರಣ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ವಿಚಾರಣೆಗೆ ಒಳಪಡಿಸಿದ್ರು ಬಿನೇಶ್ ಸರಿಯಾದ ಉತ್ತರ ನೀಡುತ್ತಿಲ್ಲವಂತೆ.
ಸದ್ಯ ಇಡಿ ಅಧಿಕಾರಿಗಳು ನಗರದ ಕಮ್ಮನಹಳ್ಳಿಯಲ್ಲಿರುವ ರೆಸ್ಟೋರೆಂಟ್ ತೆರೆಯಲು ಅನೂಪ್ಗೆ ಬಿನೇಶ್ 50 ಲಕ್ಷ ರೂ. ಹಣಕಾಸಿನ ನೆರವು ನೀಡಿರುವ ಸಂಬಂಧ ದಾಖಲೆಗಳನ್ನ ಇಟ್ಟುಕೊಂಡು ವಿಚಾರಣೆ ನಡೆಸ್ತಿದ್ದಾರೆ. ಈಗಾಗಲೇ ಎನ್ಸಿಬಿ ಅನಿಕಾ, ಅನೂಪ್ ಹಾಗೂ ಇತರರನ್ನು ಬಂಧಿಸಿದೆ. ಇದರಲ್ಲಿ ಪ್ರಮುಖವಾಗಿ ಅನೂಪ್ ಜೊತೆ ಹಣದ ವಹಿವಾಟು ಇರುವ ಕಾರಣ ಜಾರಿ ನಿರ್ದೇಶನಾಲಯ ತೀವ್ರವಾಗಿ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕ್ತಿದೆ.
ಸದ್ಯ ಇಡಿ ಅಧಿಕಾರಿಗಳ ಕೈಯಲ್ಲಿ ಬಿನೇಶ್ ಬ್ಯಾಂಕ್ ಖಾತೆ ವಿವರ, ಹಣಕಾಸು ವಹಿವಾಟು, ವಿದೇಶಕ್ಕೆ ಪ್ರಯಾಣಿಸಿರುವ ದಾಖಲೆಗಳ ಮಾಹಿತಿ ಇದೆ. ಹಾಗೆಯೇ ಡ್ರಗ್ಸ್ ಸಪ್ಲೈ ಮಾಡುವಲ್ಲಿ ಕೈ ಜೋಡಿಸಿ ಅಕ್ರಮ ಹಣ ಸಂಪಾದನೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿಯನ್ನು ಕಲೆಹಾಕ್ತಿದ್ದಾರೆ.