ಬೆಂಗಳೂರು: ರಾಜ್ಯದಲ್ಲಿ ಜಮೀನುಗಳ ಸರ್ವೇಯನ್ನ ಡ್ರೋನ್ ಮೂಲಕ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಅಶೋಕ್ ಪ್ರಕಟಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 100 ವರ್ಷಗಳಿಂದ ಆಸ್ತಿ ಸರ್ವೇ ಆಗಿಲ್ಲ. ಹೀಗಾಗಿ ಡಿಜಿಟಲ್ ಮಾಹಿತಿ ಸಂಗ್ರಹಕ್ಕೆ ಡ್ರೋನ್ ಸರ್ವೇ ಮಾಡಿಸಲಾಗುತ್ತದೆ. ಈಗಾಗಲೇ ರಾಮನಗರ, ತುಮಕೂರು, ಹಾಸನ, ಬೆಳಗಾವಿ, ಉತ್ತರ ಕನ್ನಡ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಡ್ರೋಣ್ ಸರ್ವೇ ಆಗಿದೆ. ಭಾರತೀಯ ಸರ್ವೇಕ್ಷಣಾ ಸಂಸ್ಥೆಗಳ ಮೂಲಕ ಡ್ರೋನ್ ಸರ್ವೇ ಮಾಡಿಸಲಾಗುತ್ತದೆ. ರಾಜ್ಯದ ಉಳಿದ 26 ಜಿಲ್ಲೆಗಳಲ್ಲಿ 1.40 ಲಕ್ಷ ಚದರ್ ಕಿಲೋ ಮೀಟರ್ ಡ್ರೋನ್ ಸರ್ವೇ ಮಾಡಲಾಗುತ್ತದೆ. ಇದಕ್ಕಾಗಿ ₹287 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆಯಲ್ಲಿ ಇದೆ ಎಂದರು.
ಹುತಾತ್ಮ ಯೋಧ ಇಬ್ರಾಹಿಂ ಕುಟಂಬಕ್ಕೆ ಉಚಿತ ಮನೆ:ಹಿಮಪಾತದಲ್ಲಿ ಮೃತರಾದ ಕೊಡಗು ವೀರ ಯೋಧ ಇಬ್ರಾಹಿಂ ಕುಟುಂಬಕ್ಕೆ ಸರ್ಕಾರದ ವತಿಯಿಂದ ಉಚಿತವಾಗಿ ನಿವಾಸ ಕೊಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಘೋಷಣೆ ಮಾಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಹಿಮಪಾತದಲ್ಲಿ ಮೃತಪಟ್ಟ ಕೊಡಗು ವೀರ ಯೋಧ ಇಬ್ರಾಹಿಂ ಕುಟುಂಬಕ್ಕೆ ನಿವಾಸ ಕೊಡಿ. ಅವರ ಕುಟುಂಬಕ್ಕೆ ನಿವೇಶನ ಇಲ್ಲ. ಕೂಡಲೇ ಈ ಕುಟುಂಬಕ್ಕೆ ವಸತಿ ಕೊಡಿ. ಗ್ರಾಮ ಪಂಚಾಯತಿ ಸದಸ್ಯರಿಗೆ 20 ಮನೆ ಕೊಡುತ್ತುದ್ದೀರಾ, ಇದನ್ನ ಹೆಚ್ಚಳ ಮಾಡಿ ಎಂದು ಜೆಡಿಎಸ್ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗ್ರಾಮೀಣ ಭಾಗದ ವಿವಿಧ ವಸತಿ ಯೋಜನೆಗೆ ಸರ್ಕಾರದಿಂದ 1.20 ಲಕ್ಷ ಅನುದಾನ ನೀಡಲಾಗುತ್ತಿದೆ.
ಈಗ ಕೊಡುತ್ತಿರುವ ಅನುದಾನ ಕಡಿಮೆ ಇದೆ. ಇದನ್ನ ಹೆಚ್ಚಳ ಮಾಡಲು ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಮೃತ ಯೋಧ ಇಬ್ರಾಹಿಂ ಕುಟುಂಬಕ್ಕೆ ಕೊಡಗಿನಲ್ಲಿ ಮನೆ ಕೊಡುತ್ತೇವೆ ಎಂದು ಸದನದಲ್ಲೇ ಸಚಿವ ಸೋಮಣ್ಣ ಘೋಷಿಸಿದರು.
ಕೋಳಿ ಸಾಕಾಣಿಕೆ ಕೃಷಿಗೆ :ಕೋಳಿ ಸಾಕಾಣಿಕೆಯನ್ನ ಕೃಷಿಗೆ ಸೇರಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರೋ "ಉದ್ಯಮಿಮಿತ್ರ" ಯೋಜನೆ ಜಾರಿಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಈ ಯೋಜನೆ ಅಡಿ ಉದ್ಯಮಶೀಲತೆ ಸ್ಥಾಪನೆಗೆ ಯೋಜನೆ ವೆಚ್ಚಕ್ಕಾಗಿ 50% ಬಂಡವಾಳ ಸಹಾಯಧನ ಪಡೆಯಬಹುದು. ಶೀಘ್ರವಾಗಿ ಯೋಜನೆ ರಾಜ್ಯದಲ್ಲಿ ಜಾರಿಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಕೋಳಿ ಸಾಕಾಣಿಕೆಗೆ ವಿಶೇಷ ಬಡ್ಡಿ ದರದಲ್ಲಿ ಸಾಲ ನೀಡುವ ಯಾವುದೇ ಯೋಜನೆ ಇಲ್ಲ. ಕೋಳಿ ಸಾಕಾಣಿಕೆ ಮಾಡುವರು ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳು, ಷೆಡ್ಯೂಲ್, ನಬಾರ್ಡ್ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು. ಕೋಳಿ ಸಾಕಾಣಿಕೆಯನ್ನ ಕೃಷಿಗೆ ಸೇರಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪಶು ಆ್ಯಂಬುಲೆನ್ಸ್ ಯೋಜನೆ ಜಾರಿ:ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪಶು ಆ್ಯಂಬುಲೆನ್ಸ್ ಯೋಜನೆ ಜಾರಿಗೆ ತರುತ್ತಿದ್ದು, ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಯೋಜನೆಯನ್ನು ಸಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೋ ಸಂರಕ್ಷಣೆಗೆ 275 ಸಂಚಾರಿ ಪಶು ಚಿಕಿತ್ಸಾ ವಾಹನ ಖರೀದಿಸುತ್ತೇವೆ. 15 ಆ್ಯಂಬುಲೆನ್ಸ್ ಈಗಾಗಲೇ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.
ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಟ್ಟು 275 ಆ್ಯಂಬುಲೆನ್ಸ್ಗಳು ಮಂಜೂರಾಗಿವೆ. ಪ್ರತಿ ಆ್ಯಂಬುಲೆನ್ಸ್ ನಲ್ಲಿ ಪಶು ಚಿಕಿತ್ಸಕರು ಇರುತ್ತಾರೆ. ಇದು ದೇಶದಲ್ಲಿ ಯಾರೂ ಮಾಡಿಲ್ಲ, ನಾವೇ ಮೊದಲು ಮಾಡುತ್ತಿದ್ದೇವೆ. ಶೀಘ್ರವಾಗಿ ಮುಖ್ಯಮಂತ್ರಿಗಳಿಂದ ಆ್ಯಂಬುಲೆನ್ಸ್ ಲೋಕಾರ್ಪಣೆ ಮಾಡಿಸುತ್ತೇವೆ ಎಂದರು.