ಬೆಂಗಳೂರು:ರಾಜ್ಯದ ಬಹುತೇಕ ನಗರಗಳಲ್ಲಿ ಒಳಚರಂಡಿಯ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆ. ಮಳೆಯಾದ್ರೆ ಸಾಕು ರಸ್ತೆಗಳು ಎಲ್ಲವೂ ಕೆರೆಯಂತಾಗಿ ಮನೆಗಳಿಗೆ ನೀರು ನುಗ್ಗಿ ಪರದಾಡುವಂತ ಸ್ಥಿತಿ ಎದುರಾಗುತ್ತದೆ. ಹಾಗೂ ಮಳೆಗಾಲದಲ್ಲಿ ಮ್ಯಾನ್‌ಹೋಲ್‌ಗಳು ಉಕ್ಕಿ ಮಲೀನ ನೀರು ರಸ್ತೆಗಳಲ್ಲಿ ಹರಿದು ಅಸಹನೀಯ ಪರಿಸ್ಥಿತಿ ನಿರ್ಮಾಣವಾಗುವುದು ತಪ್ಪುತ್ತಿಲ್ಲ.
ಕಲಬುರಗಿ ನಗರದಲ್ಲಿ ಸುಮಾರು 7 ಲಕ್ಷ ಜನರಿದ್ದು, ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ನಾಲ್ಕು ತಿಂಗಳ ಕಾಲ ಪಡಬಾರದ ಕಷ್ಟ ಪಡು ದುಸ್ಥಿತಿ ಎದುರಾಗಿದೆ. ನಗರದ ಸುಮಾರು ಇಪ್ಪತ್ತೈದು ಕಿ.ಮೀ. ಉದ್ದದಲ್ಲಿ ಚರಂಡಿ ನೀರು ಹರಿದು, ಭೀಮಾ ನದಿ ಪಾತ್ರದಲ್ಲಿರುವ ಶುದ್ಧೀಕರಣ ಘಟಕಕ್ಕೆ ಸೇರಬೇಕು. ಆದರೆ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ರಸ್ತೆ ಹಾಗೂ ಮನೆಗಳಿಗೆ ಚರಂಡಿ ನೀರು ನುಗ್ಗುತ್ತಿವೆ.
ಪ್ರತಿ ವರ್ಷ ಕೋಟಿ ಕೋಟಿ ಅನುದಾನ ಹರಿದು ಬಂದರೂ, ಕಲಬುರಗಿ ನಗರ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಈ ಹಿಂದೆ ಮಾಡಲಾದ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಇಂದಿಗೂ, ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೊರೊನಾ ಆತಂಕದಲ್ಲಿರುವ ಜನತೆಗೆ ಇದೀಗ ಚರಂಡಿಯ ಅವ್ಯವಸ್ಥೆಯಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಜನರ ಪರದಾಟ ಇನ್ನು ರಾಯಚೂರಿನಲ್ಲಿ ಮಳೆಯ ನೀರು, ನಗರ ಪ್ರದೇಶದ ಹೊರವಲಯಕ್ಕೆ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಮಳೆ ಬಂದರೆ ಸಾಕು ಕೆಲ ಬಡಾವಣೆಗಳಿಗೆ ನೀರು ನುಗ್ಗಿ ಜನ-ಜೀವನ ಅಸ್ತವ್ಯಸ್ತಗೊಳ್ಳುತ್ತವೆ. ಅಲ್ಲದೇ ರಾಜಕಾಲುವೆಗಳು ಒತ್ತುವರಿ ಆಗಿರುವ ಆರೋಪಗಳಿದ್ದರೂ ಅವುಗಳನ್ನು ತೆರವುಗೊಳಿಸಿಲ್ಲ. ಇದರಿಂದಾಗಿ ನಗರದಲ್ಲಿ ಮಳೆ ಬಂದ್ರೆ ಕೆಲವೆಡೆ ಪ್ರವಾಹ ಎದುರಿಸಿದಂತಹ ಸನ್ನಿವೇಶ ಎದುರಾಗುತ್ತದೆ.
ಇನ್ನು ಹಾಸನ ನಗರದ ಹೃದಯಭಾಗದ ದೊಡ್ಡ ಚರಂಡಿ ಇದ್ದು, ನಗರದ ಪ್ರಮುಖ ಬಡಾವಣೆಗಳಿಂದ ಹರಿದು ಬರುವ ತ್ಯಾಜ್ಯ ಆ ಭಾಗದಲ್ಲಿ ಓಡಾಡುವ ಜನರಿಗೆ ಸಾಂಕ್ರಾಮಿಕ ರೋಗ ಹರಡಲು ಪ್ರಮುಖ ಕಾರಣವಾಗಿದೆ. ಹಾಗೂ ಬೆಂಗಳೂರು ಮತ್ತು ಮಂಗಳೂರು ನಡುವಿನ ಸಂಪರ್ಕ ಕಲ್ಪಿಸುವ ರಸ್ತೆಯ ನಡುವೆಯೇ ಬೃಹತ್ ಚರಂಡಿ ಹರಿಯುತ್ತಿದೆ. ಇನ್ನು ಮಳೆಗಾಲದಲ್ಲಿಯಂತು ರಸ್ತೆ ಯಾವುದೋ ಚರಂಡಿ ಯಾವುದೋ ಎಂಬಂತಾಗುತ್ತದೆ.
ಈ ಕೊರೊನಾ ಸಂದರ್ಭದಲ್ಲಿ ಮುಖ್ಯವಾಗಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದುವರೆಗೂ ಚರಂಡಿ ಸುತ್ತ ಬೆಳೆದಿರುವ ಗಿಡ ಗಂಟೆಗಳನ್ನು ತೆರವುಗೊಳಿಸುವ ಕಾರ್ಯ ಕೂಡ ನಡೆದಿಲ್ಲ. ಜೊತೆಗೆ ಸೋಡಿಯಂ ಹೈಪೋಕ್ಲೋರೈಟ್ ರಾಸಾಯನಿಕ ಪದಾರ್ಥವನ್ನು ಸಿಂಪಡಿಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಸ್ಥಳೀಯ ಆಡಳಿತ ಮುಂದಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಸರ್ಕಾರವು ರಸ್ತೆ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಸಾವಿರಾರು ಕೋಟಿ ಹಣ ವಿನಿಯೋಗಿಸುತ್ತದೆ. ಆದರೂ ಕೂಡ ನಗರಗಳ ಒಳಚರಂಡಿ ಸಮಸ್ಯೆ ಬಗೆಹರಿದಿಲ್ಲದಿರುವುದು ವಿಪರ್ಯಾಸವಾಗಿದೆ..