ಬೆಂಗಳೂರು: ರಾಜು ಕಾಗೆ ನನ್ನ ಆತ್ಮೀಯ ಸ್ನೇಹಿತ. ನಮ್ಮ ಪಕ್ಷದ ಶಾಸಕನಾಗಿದ್ದ. ವಾರಕ್ಕೆ ಮೂರ್ನಾಲ್ಕು ಬಾರಿ ಭೇಟಿ ಮಾಡುತ್ತೇವೆ. ಆತನಿಗೆ ಪಕ್ಷ ಬಿಡದಂತೆ ಮನವಿ ಮಾಡಿದ್ದೇನೆ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಇವತ್ತು ಬೆಂಗಳೂರಿನ ಶಾಸಕರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಉಮೇಶ್ ಕತ್ತಿ, ನಾನು ರಾಜು ಕಾಗೆ ಜೊತೆ ಮಾತನಾಡಿದ್ದೇನೆ. ಅವರ ಬಗ್ಗೆ ಯಡಿಯೂರಪ್ಪ ಅವರ ಬಳಿಯೂ ಚರ್ಚಿಸಿದ್ದೇನೆ. ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧರಿಸ್ತಾರೆ. ಪಕ್ಷ ಬಿಡದಿರುವಂತೆ ಮನವಿ ಮಾಡಿದ್ದೇನೆ ಎಂದರು. ಅನರ್ಹತೆ ವಿಚಾರದಲ್ಲಿ ಕಾಂಗ್ರೆಸ್ಗೆ ಗೆಲುವಾಗಿರಬಹುದು. ಆದರೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರದಲ್ಲಿ ನಮಗೆ ಜಯವಾಗಿದೆ. 15ಕ್ಕೆ 15 ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ರಾಜಕೀಯದ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಕತ್ತಿ, ನಾನೊಬ್ಬ ಹುಕ್ಕೇರಿ ಮತಕ್ಷೇತ್ರದ ಸಾಮಾನ್ಯ ಶಾಸಕ. ಇಡೀ ಬೆಳಗಾವಿ ಜಿಲ್ಲೆಯ ರಾಜಕೀಯ ಮಾತನಾಡುವಷ್ಟು ದೊಡ್ಡವನಲ್ಲ. ಪಕ್ಷ ಉಸ್ತುವಾರಿ ಕೊಟ್ಟರೆ ಕೆಲಸ ಮಾಡ್ತೀನಿ, ಇಲ್ಲಾಂದ್ರೆ ಇಲ್ಲ ಎಂದು ಹೇಳಿದರು.
ಇದೇ ವೇಳೆ ಅನರ್ಹತೆಯೇ ಕಳಂಕ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕತ್ತಿ, ಸಿದ್ದರಾಮಯ್ಯ ಅವರಿಗೆ ತಿಳಿದಿದ್ದನ್ನ ಅವರು ಹೇಳ್ತಾರೆ. ನಮಗೆ ಏನು ತಿಳಿಯುತ್ತೋ ಅದನ್ನ ನಾವು ಹೇಳ್ತೇವೆ. ಈ ಎಲ್ಲರೂ ಚುನಾವಣೆಗೆ ಸ್ಪರ್ಧೆ ಮಾಡ್ತಿರೋದ್ರಿಂದ ಅನರ್ಹರು ಅರ್ಹರಾಗಿದ್ದಾರೆ ಎಂದರು.
ಈ ಹಿಂದೆ ಕಾಗವಾಡ ವಿಧಾನಸಭಾ ಚುನಾವಣೆಯಲ್ಲಿ ಶ್ರೀಮಂತ್ ಪಾಟೀಲ್ ವಿರುದ್ಧ ಬಿಜೆಪಿ ನಾಯಕ ರಾಜು ಕಾಗೆ ಸೋತಿದ್ದರು. ಈಗ ಕಾಂಗ್ರೆಸ್ನಿಂದ ಅನರ್ಹಗೊಂಡಿರುವ ಶ್ರೀಮಂತ್ ಪಾಟೀಲ್ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿದೆ.